ಕಾಲವನ್ನು ತಡೆಯೋರು ಯಾರೂ ಇಲ್ಲ…

ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ‘ಕಾಫಿ ತೋಟ’ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಎಂದು ಮನ್ವಂತರ ಸಂಸ್ಥೆಯಿಂದ ಎರಡನೇ ಚಿತ್ರ ಪ್ರಕಟಿಸಿದ್ದಾರೆ. ಬದಲಾದ ಕಾಲದ ವೇಗಕ್ಕೆ ತಕ್ಕಂತೆ  ಹೊಸತನದ ಚಿತ್ರ ಕೊಡುವ ತಮ್ಮ ತುಡಿತಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿರುವ ಸಣ್ಣ ಭಾವುಕ ತೃಪ್ತಿ ಅವರಲ್ಲಿದೆ. ಅವರು ಸಿನೆಮಾ ತಮ್ಮ ಮೊದಲ ಪ್ರೀತಿ ಎನ್ನುತ್ತಾರೆ.
* ನಿಮ್ಮಲ್ಲಿ ಧಾರಾವಾಹಿಗೆ ಮೀರಿದ ಸೆಳೆತ ಸಿನೆಮಾದೆಡೆ ಇದೆ ಅನ್ಸುತ್ತೆ?
ಯಾಕೆಂದ್ರೆ ನಾನು ಮೊದಲು ಬಂದಿದ್ದೆ ಲಂಕೇಶ್ ಅವ್ರ ಪಲ್ಲವಿ ಚಿತ್ರದಿಂದ. ಯಾವಾಗ್ಲೂ ಫಸ್ಟ್ ಲವ್ ಇಸ್ ದಿ ಬೆಸ್ಟ್ ಲವ್ ಅಂತಾರಲ್ಲಾ ಹಾಗೆ. ಸಿನೆಮಾ ಎನ್ನೋದು ಶಾಶ್ವತವಾದ್ದು ಧಾರವಾಹಿನ ಜನ ಅವತ್ತು ನೋಡ್ತಾರೆ ಮುಂದಕ್ಕೆ ಇರೋಲ್ಲ. ಧಾರಾವಾಹಿ ಗಾಳಿಯಲ್ಲಿ ಹೊರ್‍ಟೋಗ್ಹುತ್ತೆ ಜನರ ನೆನಪಲ್ಲಿ ಇದ್ರೆ ಇರುತ್ತೆ ಇಲ್ಲಾಂದ್ರೆ ಇಲ್ಲ. ಆದ್ರೆ ಸಿನೆಮಾ ಹಾಗಲ್ಲ ನೆನಪಲ್ಲಿ ಮಾತ್ರವಲ್ಲ ಅಸ್ಥಿತ್ವದಲ್ಲಿರುತ್ತೆ.
* ನೀವು ಮಾಯಾಮೃಗ, ಮುಕ್ತ, ಮನ್ವಂತರ ಧಾರಾವಾಹಿ ಮಾಡಿದಾಗ ಇದ್ದ ಅಭಿರುಚಿ ಕಿರುತೆರೆಯ ಪ್ರೇಕ್ಷಕರಲ್ಲಿ ಕಾಣಿಸುತ್ತಿಲ್ಲ ಅಲ್ವಾ?
ಕಿರುತೆರೆಯಲ್ಲಿ ಜನರ ಅಭಿರುಚಿ ಐದು ವರ್ಷಗಳಿಗೊಮ್ಮೆ ಬದಲಾಗುತ್ತೆ ಇದು ಬದಲಾಗುವ ವರ್ಷ. ನಾನು ಗಮನಿಸಿದಂತೆ ೧೯೮೯ರಿಂದ ಈ ಬದಲಾವಣೆ ಆಗ್ತಿದೆ ನಾನು ಮಾಯಾಮೃಗ ಮಾಡಿದ ರೀತಿಯಲ್ಲಿ ಮುಕ್ತ ಮಾಡಲಿಲ್ಲ ಮುಕ್ತದಲ್ಲಿ ವೇಗವಿದೆ. ಜನರ ಅಭಿರುಚಿ, ಜೀವನದ ಗತಿ, ಅದರ ವೇಗ ಬದಲಾವಣೆಯಾದ ಹಾಗೆನೇ ಧಾರಾವಾಹಿ ಕೂಡ ಬದಲಾಗುತ್ತೆ.
* ಜನ ಮೆಚ್ಚುವ ಧಾರಾವಾಹಿ ಕೊಟ್ಟರು ಕೂಡ ಈಗ ವಾಹಿನಿಗಳೊಂದಿಗೆ ಬೇರೆ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತಿದೆಯಾ?
ನನ್ಗೆ ಗೊತ್ತಿಲ್ಲ ಯಾಕೆಂದ್ರೆ ಮೂರು ವರ್ಷಗಳಿಂದ ನಾನು ಧಾರವಾಹಿ ಮಾಡ್ತಿಲ್ಲ. ಮೊದಲೆಲ್ಲಾ ವಾಹಿನಿಯಲ್ಲಿ ಕನ್ನಡದವರೇ, ಇಲ್ಲಿಯವರೇ ಇರ್‍ತಿದ್ರು ಈಗಿನದು ನನ್ಗೆ ಗೊತ್ತಿಲ್ಲ ಅವ್ರಿಗೆ ಬೇರೆಯದೇ ನಾನಾ ಒತ್ತಡಗಳು ಇರಬಹುದು.
* ಜನರಲ್ಲಿ ಭಾವುಕ ಸ್ಪಂದನಗಳು ಕಡಿಮೆಯಾಗಿದೆಯಲ್ವಾ?
ನಮ್ಮ ರೋಚಕ ಬುದ್ಧಿ ಮುಂದೆಹೋಗಿ ನಮ್ಮ ಭಾವನೆಗಳು ಸ್ವಲ್ಪ ಕಡಿಮೆ ಆಗಿದೆ ಆದ್ರೂ ಮೂಲತಃ ಮನುಷ್ಯ ಭಾವುಕನೇ. ನನ್ನ ಕಾಲದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ  ಶೇ. ೬೦ರಷ್ಟು ಅಂಕಗಳಿಸಿದ್ರೆ ಊರಲ್ಲಿ ಮೆರವಣಿಗೆ ಮಾಡೋರು. ಈಗ ಅಷ್ಟು ಅಂಕ ತಗೊಂಡ್ರೆ ಫೇಲ್ ಆದ್ಹಾಗೆ ಶೇ. ೯೯ರಷ್ಟು ತಗೋಬೇಕು ಅಂದ್ರೆ ಬುದ್ಧಿ ಜಾಸ್ತಿ ಆಗ್ತಿದೆ, ತೀಕ್ಷ್ಣತೆ ಜಾಸ್ತಿ ಆಗಿದೆ ಹಾಗಾಗಿ ಹೃದಯ ಸ್ವಲ್ಪ ನಿಧಾನವಾಗಿದೆ.
* ನಿಮ್ಮನ್ನು ರಿಯಾಲಿ ಶೋಗಳಲ್ಲಿ ನೋಡಿದಾಗ ಬದಲಾದ ಕಾಲದ ಹೊಸ ವೇಗಕ್ಕೆ ಹೊಂದಿಕೊಳ್ಳುತ್ತಿದ್ದೀರ ಅನ್ಸುತ್ತೆ?
ಇಲ್ಲಾಂದರೆ ಅಸ್ಥಿತ್ವವೇ ಇರೋದಿಲ್ಲ. ಒಳ್ಳೆ ಮೌಲ್ಯಗಳನ್ನು ಹೇಳಿದ್ರೂ ಅದನ್ನುಹೊಸ ವೇಗದಲ್ಲಿ ಹೇಳಬೇಕು. ಯಾಕೆಂದ್ರೆ ಅದೇ ಮೌಲ್ಯಗಳೇ ಇರೋದು. ಮಹಾಭಾರತದಿಂದ ಹಿಡಿದು ಇವತ್ತಿಗೂ ಅದೇ ಸಂಬಂಧಗಳೇ ಇರೋದು. ಅದೇ ಮಮತೆ, ಗೆಳತನ, ಸಂಬಂಧಗಳು, ಬಾಂಧವ್ಯ, ಭಾವುಕತೆ ಎಲ್ಲಾ ಅದೇ ರೀತಿನೇ ಇರೋದು ಆದರೆ ಅಗಿನ ವೇಗ ನಿಧಾನವಷ್ಟೇ.
* ಕಾಫಿ ತೋಟದ ಯಶಸ್ಸು ಏನೆನಿಸ್ತಿದೆ? ನಿಮ್ಮ ಸಿನೆಮಾ ನಡೆ ತೃಪ್ತಿ ಕೊಟ್ಟಿದೆಯಾ?
ಕಾಫಿ ತೋಟಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರೋದು ಸಂತೋಷ ಸಂಭ್ರಮ ಅನ್ಸುತ್ತೆ. ನಾನು ಹತ್ತು ವರ್ಷಕ್ಕೊಂದು ಎನ್ನುವಂತೆ ವಿಭಿನ್ನ ಸಿನೆಮಾ ಮಾಡ್ತಿದ್ದೇನೆ ಚೆನ್ನಾಗಿ ನಡೆದು ಕೊಂಡು ಹೋಗ್ತಿದೆ.                                     -ಕೆ.ಬಿ. ಪಂಕಜ

Leave a Comment