ಕಾರ್ ಸ್ಟೀರಿಯೊಗಳ ಕಳವು ಮೆಕಾನಿಕ್ ಗ್ಯಾಂಗ್ ಸೆರೆ

ಬೆಂಗಳೂರು, ಸೆ. ೭- ಮೈಸೂರಿನಿಂದ ನಗರಕ್ಕೆ ಬಂದು ಕಾರುಗಳ ಗಾಜುಗಳನ್ನು ಒಡೆದು ಸ್ಟೀರಿಯೊ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಮೆಕಾನಿಕ್‌ಗಳನ್ನು ಕೆಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಶಾಂತಿನಗರದ ನಜೀರ್ ಪಾಷ (43), ರಿಯಾಜ್ ಪಾಷ (35), ಗೌಸಿಯಾ ನಗರದ ಅಫ್ರೋಜ್ ಪಾಷ (53), ಗಂಗೊಂಡನಹಳ್ಳಿಯ ಸಜ್ಜಾದ್ ಅಹ್ಮದ್ (28) ಬಂಧಿತ ಆರೋಪಿಗಳಾಗಿದ್ದಾರೆ.
ಇವರ ಗ್ಯಾಂಗ್‌ನಲ್ಲಿ ಸೇರಿ ಕೃತ್ಯವೆಸಗುತ್ತಿದ್ದ ಮತ್ತೊಬ್ಬ ಆರೋಪಿ ಸಲೀಂ ಪಾಷ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ ಎಂದು ಡಿಸಿಪಿ ರವಿಚೆನ್ನಣ್ಣವರ್ ತಿಳಿಸಿದ್ದಾರೆ.
ಬಂಧಿತರಿಂದ 7 ಲಕ್ಷ ಮೌಲ್ಯದ ಕಾರು ಸ್ಟೀರಿಯೊಗಳನ್ನು ವಶಪಡಿಸಿಕೊಂಡು ರಾಜಾಜಿನಗರದ 11, ವಿಜಯನಗರದ 7, ಬಸವೇಶ್ವರನಗರ 7, ನಂದಿನಿ ಲೇಔಟ್‌ನ 4, ಅನ್ನಪೂರ್ಣೇಶ್ವರಿ ನಗರದ 2, ಬ್ಯಾಟರಾಯನಪುರ, ಜ್ಞಾನಭಾರತಿ, ಮಾಗಡಿ ರಸ್ತೆ, ಕೆಪಿಅಗ್ರಹಾರದ ತಲಾ 1 ಸೇರಿ 13 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಆರೋಪಿಗಳಾದ ನಜೀರ್ ಪಾಷ, ರಿಯಾಜ್ ಹಾಗೂ ಅಫ್ರೋಜ್ ಮೆಕಾನಿಕ್‌ಗಳಾಗಿದ್ದು, ಕಾರಿನ ಹಿಂಭಾಗದ ಗಾಜನ್ನು ಶಬ್ಧ ಬಾರದಂತೆ ಒಡೆಯುವಲ್ಲಿ ಪರಿಣಿತಿ ಹೊಂದಿದ್ದರು. ಮೈಸೂರಿನಿಂದ ನಗರಕ್ಕೆ ಬಂದು ಪಶ್ಚಿಮ ವಿಭಾಗದ ವಿವಿಧ ಪ್ರದೇಶಗಳಲ್ಲಿ ಮತ್ತೊಬ್ಬ ಆರೋಪಿ ಸಜ್ಜಾದ್ ಅಹ್ಮದ್ ಜತೆ ಸೇರಿ ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ದುಬಾರಿ ಕಾರುಗಳ ಗಾಜುಗಳನ್ನು ಒಡೆದು ಸ್ಟೀರಿಯೊ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು.
ಕಳವು ಮಾಡಿದ ಸ್ಟೀರಿಯೊಗಳನ್ನು ಮೈಸೂರಿನಲ್ಲಿ ವಿಲೇವಾರಿ ಮಾಡಲು ಯತ್ನಿಸಿ ಸಾಧ್ಯವಾಗದೆ ನಗರದ ಜೆಸಿನಗರದಲ್ಲಿ ವ್ಯಾಪಾರಿಗಳನ್ನು ಪರಿಚಯ ಮಾಡಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು.
ಕೆಪಿ ಅಗ್ರಹಾರದಲ್ಲಿ ನಡೆದಿದ್ದ ಕಾರ್ ಸ್ಟೀರಿಯೊ ಕಳ್ಳತನ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡು ಕೆಪಿ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment