ಕಾರ್ ಡಿಕ್ಕಿ: ಸೋದರರ ದುರ್ಮರಣ

ಸಾಲಿಗ್ರಾಮ, ಜೂ.೨೮- ರಸ್ತೆ ಬದಿಯಲ್ಲಿ ನಿಂತು ಮಾತನಾಡುತಿದ್ದ ಸಹೋದರರ ಮೇಲೆ ಮಿತಿಮೀರಿದ ವೇಗದಲ್ಲಿ ಸಾಗಿಬಂದ ಕಾರ್ ಹರಿದ ಪರಿಣಾಮ ಇಬ್ಬರೂ ಮೃತಪಟ್ಟ ಘಟನೆ ನಿನ್ನೆ ಸಂಜೆ ಸಾಲಿಗ್ರಾಮದ ಹಳ್ಳಿಮನೆ ಹೊಟೇಲ್ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತ ಸಹೋದರರನ್ನು ನಾರಾಯಣ(೫೦) ಹಾಗೂ ಚಂದ್ರ(೪೮) ಎಂದು ಗುರುತಿಸಲಾಗಿದೆ. ಇವರಿಬ್ಬರೂ ರಸ್ತೆ ಬದಿಯಲ್ಲಿ ನಿಂತು ಮಾತನಾಡುತಿದ್ದಾಗ ಕುಂದಾಪುರದಿಂದ ಉಡುಪಿಯತ್ತ ಬರುತ್ತಿದ್ದ ಇಕೋ ಕಾರು ನೇರವಾಗಿ ಸಹೋದರರಿಗೆ ಡಿಕ್ಕಿ ಹೊಡೆದಿದೆ. ಇವರಲ್ಲಿ ಚಂದ್ರ ಸ್ಥಳದಲ್ಲೇ ಮೃತಪಟ್ಟರೆ, ನಾರಾಯಣ ಅವರು ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ರಾತ್ರಿ ಮೃತಪಟ್ಟರೆಂದು ಕೋಟ ಪೊಲೀಸರು ತಿಳಿಸಿದ್ದಾರೆ.
ಮೃತರು ಸಾಲಿಗ್ರಾಮ ಬಳಿಕ ಕಾರ್ಕಡ ಗ್ರಾಮದ ನಿವಾಸಿಗಳೆಂದು ಹೇಳಲಾಗಿದೆ. ಭಾರೀ ವೇಗದಲ್ಲಿದ್ದ ಕಾರ್ ಡಿಕ್ಕಿ ಹೊಡೆದು ಚಂದ್ರ ಅವರನ್ನು ಕೆಲವು ಮೀಟರ್ ದೂರ ಎಳೆದುಕೊಂಡು ಹೋಗಿದ್ದು ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು. ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ರಸ್ತೆಯಿಂದ ಹಾರಿ ತೋಡಿಗೆ ಹೋಗಿಬಿದ್ದಿದೆ. ಇದರ ಭೀಕರತೆ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment