ಕಾರ್ಯವೈಖರಿ ಸುಧಾರಿಸಿಕೊಳ್ಳದಿದ್ದರೇ ಶಿಸ್ತು ಕ್ರಮಕ್ಕೆ ಶಿಫಾರಸ್ಸು : ಸಿಇಓರಿಗೆ ಎಚ್ಚರಿಕೆ

* ಶಿವರಾಜ ಪಾಟೀಲ್, ಬೋಸರಾಜರಿಂದ ಭಾರೀ ಆಕ್ರೋಶ : ಇಂತಹ ಸಿಇಓ ಬೇಕೆ?
ರಾಯಚೂರು.ಜೂ.18- ಭೀಕರ ಬರದ ಪರಿಸ್ಥಿತಿಯಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ತಲೆಯೆತ್ತಿದ ನೀರಿನ ಸಮಸ್ಯೆ ಪರಿಹಾರ ಒದಗಿಸುವಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ನಲೀನ್ ಅತುಲ್ ಅವರ ವಿರುದ್ಧ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕೆಂಡಾಮಂಡಲ ಹಿನ್ನೆಲೆ, ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರು ಕಾರ್ಯವೈಖರಿ ಸುಧಾರಿಸಿಕೊಳ್ಳದಿದ್ದರೇ, ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆಂದು ಸಿಇಓರಿಗೆ ಎಚ್ಚರಿಸಿದ ಪ್ರಸಂಗ ಇಂದಿನ ಸಭೆಯಲ್ಲಿ ನಡೆಯಿತು.
ಜೂ.26 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಜಿಲ್ಲಾ ಕುಡಿವ ನೀರಿನ ವಿಷಯ ಚರ್ಚೆ ಗಂಭೀರಗೊಂಡು ಸಿಇಓ ನಲೀನ್ ಅತುಲ್ ಅವರ ವಿರುದ್ಧ ಆಕ್ರೋಶ ಕೇಂದ್ರೀಕೃತಗೊಂಡು ಇಂತಹ ಅಧಿಕಾರಿಯಿಂದ ಜಿಲ್ಲೆಯಲ್ಲಿ ಜನರ ಸಮಸ್ಯೆ ನಿವಾರಣೆ ಅಸಾಧ್ಯ ಎನ್ನುವ ಮಟ್ಟಕ್ಕೆ ಆಕ್ರೋಶ ಹೊರ ಬೀಳುವಂತಾಯಿತು.
ಆರಂಭದಲ್ಲಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು, ತಮ್ಮ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಇಲ್ಲಿವರೆಗೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲವೆಂದು ಆರೋಪಿಸಿದರು. ನೀರಿನ ಸಮಸ್ಯೆ ಗಂಭೀರವಾಗಿದೆ. ನಾನು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇನೆ. ಅಲ್ಲಿಯ ಪಿಡಿಓ ಸೇರಿದಂತೆ ಯಾವುದೇ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.
ಪ್ರತಿ ಸಲ ಕುಡಿವ ನೀರಿನ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕಿವಿಗೊಡುತ್ತಿಲ್ಲ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯಾವ ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಹೇಳಲಿ. ಎಲ್ಲಿ ನೀರಿನ ಸಮಸ್ಯೆ ನಿವಾರಿಸಿದ್ದಾರೆಂದು ಪ್ರಶ್ನಿಸಿದ ಅವರು, ಇಂತಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಬರ ನಿರ್ವಹಣೆ ಅಸಾಧ್ಯವೆಂದು ಖಾರವಾಗಿ ಮಾತನಾಡಿದಾಗ ಉಸ್ತುವಾರಿ ಸಚಿವರು, ಸಿಇಓರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು, ಜವಾಬ್ದಾರಿಯುತ ಅಧಿಕಾರಿ ಕೆಲಸ ನಿರ್ವಹಿಸುವಲ್ಲಿ ವಿಫಲವಾದ ಕಾರಣ ಜನ ನಮ್ಮ ಹತ್ತಿರ ಬರುವಂತಾಗಿದೆ. ನಾವು ಸಂಬಂಧಪಟ್ಟ ಗ್ರಾಮ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿವೆ. ಕುಡಿವ ನೀರು ಸೇರಿದಂತೆ ಇತರೆ ಸಮಸ್ಯೆ ಬಗ್ಗೆ ಗಮನಕ್ಕೂ ತಂದರೂ, ಅಧಿಕಾರಿಗಳು ಇವುಗಳನ್ನು ಪರಿಹರಿಸುವಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ಸಿಇಓ ಅವರು, ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿಲವೆಂದು ಆರೋಪಿಸಿದರು.
ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರ ಈ ಆಕ್ರೋಶದ ಹಿನ್ನೆಲೆ, ಸಭೆ ತೀವ್ರ ಗಂಭೀರಗೊಂಡಿತು. ಉಸ್ತುವಾರಿ ಸಚಿವರು, ಸಿಇಓ ನಲೀನ್ ಅತುಲ್ ಅವರನ್ನು ನೀವು ಇಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಾಡುತ್ತಿರುವುದಾದರೇನು? ಎಂದು ಪ್ರಶ್ನಿಸಿದರು. ಇದಕ್ಕೆ ಸಿಇಓ ಅವರು ಕೆಳ ಮಟ್ಟದ ಅಧಿಕಾರಿಗಳಿಗೆ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಸೂಚನೆ ನೀಡಿರುವುದಾಗಿ ಸ್ಪಷ್ಟೀಕರಣ ನೀಡಿದಾಗ ಇದರಿಂದ ತೃಪ್ತಿಗೊಳ್ಳದ ಸಚಿವರು, ನೀವು ನಿಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಬೋಳಮಾನದೊಡ್ಡಿಯಲ್ಲಿ ವಿದ್ಯುತ್ ಕಡಿತದಿಂದ ಕುಡಿವ ನೀರಿನ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಜಾತ್ರೆ ಸಮಯದಲ್ಲಿ ನಾನು 40 ಟ್ಯಾಂಕರ್ ನೀರು ಪೂರೈಸಿದ್ದೇನೆ. ಮಲಿಯಾಬಾದನಲ್ಲಿ ಟ್ಯಾಂಕರ್ ನೀರಿಗೆ ಇಲ್ಲಿವರೆಗೂ ಬಿಲ್ ಪಾವತಿಸಿಲ್ಲ. ಕುಡಿವ ನೀರಿನ ಟ್ಯಾಂಕರ್‌ಗಳಿಗೆ ಜಿಎಸ್‌ಟಿ ಪಾವತಿ ಬಗ್ಗೆ ಅಧಿಕಾರಿಗಳು ಕೇಳುತ್ತಿದ್ದಾರೆ. ಕುಡಿವ ನೀರಿನ ಪೂರೈಕೆಗೂ ಜಿಎಸ್‌ಟಿ ಕೇಳುತ್ತಾರೆಯೇ? ಎನ್ನುವ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಪ್ರಶ್ನೆ ಎಲ್ಲರ ಬಾಯಿಕಟ್ಟುವಂತೆ ಮಾಡಿತು.
ಜೆಸ್ಕಾಂ ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯ ಅನುಸರಿಸುತ್ತಿದ್ದಾರೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳದ ಕಾರಣ ರೈತರು ತಮ್ಮ ಜಮೀನಿಗೆ ನೀರು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಅವರು, ತಮ್ಮ ಆಕ್ರೋಶ ಮುಂದುವರೆಸುತ್ತಾ, ಜಿಲ್ಲೆಯ ಪಿಡಿಓಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದರಿಂದ ಜನ ತೀವ್ರ ಅಸಮಾಧಾನಗೊಂಡು ಜನಪ್ರತಿನಿಧಿಗಳನ್ನೂ ಪ್ರಶ್ನಿಸುವಂತೆ ಮಾಡಿದೆ.
ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡುತ್ತಾ, ಜೂ.26 ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆ ಆಗಮಿಸಲಿದ್ದಾರೆ. ಆದರೆ, ಕರೇಗುಡ್ಡ ಗ್ರಾಮದಲ್ಲಿ ಇನ್ನೂವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂ‌ಡಿಲ್ಲ. ಮುಖ್ಯಮಂತ್ರಿ ವಾಸ್ತವ್ಯ ಮಾ‌ಡುವ ಶಾಲೆಗೆ ಇಲ್ಲಿವರೆಗೂ ಸುಣ್ಣ-ಬಣ್ಣದ ವ್ಯವಸ್ಥೆಯೂ ಮಾಡಲಾಗಿಲ್ಲ.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ನಿಮ್ಮಿಂದಾಗುತ್ತದೆಯೋ? ಇಲ್ಲವೇ? ಎಂದು ಅಧಿಕಾರಿಗಳು ಹೇಳಬೇಕು. ನಿಮ್ಮಿಂದಾಗದಿದ್ದರೇ ನಾವು ಸ್ವಂತ ಖರ್ಚು ವೆಚ್ಚದಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುತ್ತೇವೆಂದು ತಮ್ಮ ಅಸಮಾಧಾನ ತೋಡಿಕೊಂಡರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಅಧಿಕಾರಿಗಳು ಸತ್ತರೂ ಕೆಲಸ ಮಾಡುವುದಿಲ್ಲ.
ಕಾರ್ಯಕ್ರಮ ಯಶಸ್ವಿಯಾಗಬೇಕಾದರೇ, ನೀವು ಮತ್ತು ಬೋಸರಾಜು ಅವರು ತಲಾ ಅರ್ಧ ಹಣ ಹಾಕಿ ಕೆಲಸ ಕೈಗೆತ್ತಿಕೊಳ್ಳಿ. ಇಲ್ಲದಿದ್ದರೇ, ಕಾರ್ಯಕ್ರಮ ಸಂಕಷ್ಟಕ್ಕೆ ಸಿಕ್ಕುತ್ತದೆಂದು ಹೇಳಿದರು. ಒಟ್ಟಾರೆಯಾಗಿ ಇಂದಿನ ಸಭೆ ಜನಪ್ರತಿನಿಧಿಗಳ ಆಕ್ರೋಶ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕೇಂದ್ರೀಕೃತಗೊಂಡಿತು. ಸಿಇಓ ಅವರು ಕಛೇರಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎನ್ನುವ ಅಸಮಾಧಾನ ಜನಪ್ರತಿನಿಧಿಗಳಿಂದ ಆಕ್ರೋಶವೊಂದು ಹೊರ ಹೊಮ್ಮಿತು.
ವೇದಿಕೆ ಮೇಲೆ ಜಿ.ಪಂ. ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಬಿ.ಶರತ್, ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ ಉಪಸ್ಥಿತರಿದ್ದರು.

Leave a Comment