ಕಾರ್ಯಕರ್ತರ ಕಡೆಗಣನೆ ಬಿಜೆಪಿ ಸೋಲಿಗೆ ಕಾರಣ: ಸೊಗಡು

ತುಮಕೂರು, ನ. ೮- ಪಂಚ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದೇ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕಿತ್ತು. ಪಕ್ಷವನ್ನು ವಲಸಿಗರ ಕೈಗೆ ಗುತ್ತಿಗೆ ಕೊಡದೆ ಮೂಲ ಕಾರ್ಯಕರ್ತರಿಗೆ ಕೊಟ್ಟಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. ಉಪಚುನಾವಣೆ ಬಹಳ ಬೇಸರ ತಂದಿದ್ದು, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಹಲವರ ಸಲಹೆ ಜತೆಗೆ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸಬೇಕಿತ್ತು. ವಲಸಿಗರಿಗೆ ಮಣೆ ಹಾಕದೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ನೀಡಬೇಕಿತ್ತು. ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬ ನೋವು ನನಗಿದೆ ಎಂದರು.

ಪಕ್ಷದ ರಾಜ್ಯ ನಾಯಕರು ಉಪ ಚುನಾವಣೆಯ ಫಲಿತಾಂಶದ ನಂತರವಾದರೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು ಎಂದು ಸಲಹೆ ನೀಡಿದರು.

ನಮ್ಮ ಪಕ್ಷ ಕುಟುಂಬ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ, ಕಾರ್ಯಕರ್ತರೇ ನಮ್ಮ ನಾಯಕರು, ಉಪ ಚುನಾವಣೆ ಸೋಲಿನಿಂದ ನಮ್ಮ ಮತದಾರರ ಶಕ್ತಿ ಕುಗ್ಗಿಲ್ಲ, ಶಕ್ತಿ ವಿರಾಟವಾಗಿದೆ. ಹಿಂದೂಗಳ ಪರ, ನಾಗರಿಕರ ಪರವಾಗಿರುವ ನಾವು ಚಾಮರಾಜನಗರದಿಂದ ಬೀದರ್‌ವರೆಗೂ 2011-12ರಲ್ಲಿ ಆನ್‍ಲೈನ್‍ನಲ್ಲಿ ಸುಮಾರು 1 ಕೋಟಿಗೂ ಮೀರಿ ಪಕ್ಷಕ್ಕೆ ಕಾರ್ಯಕರ್ತರು ನೊಂದಾಯಿಸಿಕೊಂಡಿದ್ದಾರೆ. ಕೋಲಾರದಿಂದ ಕಾರವಾರದರೆಗೂ ಸುಮಾರು 60 ಸಾವಿರ ಬೂತ್‍ಗಳಿಗೆ 6 ಲಕ್ಷ ಜನರು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಶಿವಮೊಗ್ಗದಲ್ಲಿ ಬಿಜೆಪಿ ಮಾಜಿ ಉಪಾಧ್ಯಕ್ಷರಾದ ಭಾನುಪ್ರಕಾಶ್ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಪ್ರೀತಿ, ವಿಶ್ವಾಸ ಎಂಬುದು ನಾಯಕತ್ವ ವಹಿಸಿಕೊಂಡವರಿಗೆ ಇರಬೇಕು. ಇದು ಹೀಗೆ ಮುಂದುವರೆದರೆ ಮುಂದಿನ ಲೋಕಸಭಾ ಚುನಾವಣೆಗೆ ಹಿನ್ನಡೆಯಾಗಬಹುದು ಎಂದು ಹೇಳುವ ಮೂಲಕ ಎಚ್ಚರಿಸಿದ್ದಾರೆ ಎಂದರು.

ಸರ್ದಾರ್‍ಗಳ ಪಾರ್ಟಿ
ಬಿಜೆಪಿ ಪಕ್ಷವನ್ನು ರಾಜ್ಯ ನಾಯಕರು ಸರ್ದಾರ್‌ಗಳ ಕೈಗೆ ಕೊಡುವುದನ್ನು ಮೊದಲು ನಿಲ್ಲಿಸಿ ಕಾರ್ಯಕರ್ತರ ಕೈಗೆ ಕೊಟ್ಟರೆ ಪಕ್ಷ ಸಂಘಟನೆ ಜತೆಗೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂ ಶಕ್ತಿ ಕುಗ್ಗಿಸಲು ಕುತಂತ್ರ
ರಾಜ್ಯದಲ್ಲಿ ಹಿಂದೂ ಶಕ್ತಿಯನ್ನು ಕುಗ್ಗಿಸಲು ಬೇರೆ ಬೇರೆ ಪಕ್ಷಗಳು ಕುತಂತ್ರ ನಡೆಸುತ್ತಿವೆ. ಅದು ನಡೆಯುವುದಿಲ್ಲ ಎಂದು ಎಚ್ಚರಿಸಿದರು.

ಟಿಪ್ಪು ಜಯಂತಿಗೆ ವಿರೋಧ
ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ನಡೆಸಲು ಮುಂದಾಗಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ. ನಂದೀಶ್, ಜಯಸಿಂಹರಾವ್, ಕೆ.ಪಿ. ಮಹೇಶ್, ಶಾಂತರಾಜು, ಬನಶಂಕರಿಬಾಬು, ಕೆ. ಹರೀಶ್, ಊರುಕೆರೆ ನಂಜುಂಡಪ್ಪ, ನವೀನ್, ಮದನ್‍ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Leave a Comment