ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ಜ.೮- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಇಂದಿನಿಂದ ಎರಡು ದಿನಗಳ ಕಾಲ  ದೇಶಾದ್ಯಂತ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಅಂಗವಾಗಿ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.

  • ಬೇಡಿಕೆಗಳು ಏನೇನು?
  • ಬೆಲೆ ಏರಿಕೆ ತಡೆ, ಉದ್ಯೋಗ ಸೃಷ್ಟಿ
  • ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗಧಿ
  • ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧ ? ಸಮಾನ ಕೆಲಸಕ್ಕೆ ಸಮಾನ ವೇತನ
  • ಅಂಗನವಾಡಿ , ಬಿಸಿಯೂಟ ಹಾಗೂ ಆಶಾ ನೌಕರರ ಖಾಯಂಮಾತಿಗೆ ಒತ್ತಾಯ.
  • ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತೆ ಹಾಗೂ ೬ ಸಾವಿರ ಮಾಸಿಕ ನಿವೃತ್ತಿ ವೇತನ
  • ೧೮ ಸಾವಿರ ಕನಿಷ್ಠ ವೇತನಕ್ಕೆ ಒತ್ತಾಯ.
  • ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆ
  • ಕಾರ್ಪೋರೇಟ್ ಕಂಪನಿಗಳ ಪರ ಕಾರ್ಮಿಕ ಕಾನೂನು ತಿದ್ದುಪಡಿಗೆ ವಿರೋಧ
  • ಮೋಟರ್ ವಾಹನ ಮಸೂದೆ ೨೦೧೭ ವಿರೋಧಿಸಿ

ನಗರದ ಪುರಭವನ, ಬನ್ನಪ್ಪ ಪಾರ್ಕ್, ಮೈಸೂರು ಬ್ಯಾಂಕ್ ವೃತ್ತ, ಫ್ರೀಡಂ ಪಾರ್ಕ್, ಮೌರ್ಯ ವೃತ್ತ ಸೇರಿದಂತೆ ನಾನಾ ಕಡೆ, ಎಫ್‌ಕೆಎಆರ್‌ಡಿಯು ಸಂಘಟನೆ, ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್, ಎಲ್‌ಐಸಿ ಏಜೆಂಟ್ಸ್, ಸಂಘಟನೆ ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಬ್ಯಾಂಕ್ ಉದ್ಯೋಗಿಗಳು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಹತ್ತಕ್ಕೂ ಅಧಿಕ ಕಾರ್ಮಿಕ ಸಂಘಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರದ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ದೇಶದಲ್ಲಿ ಎಲ್ಲಾ ರಂಗಗಳು ದಿವಾಳಿಯಾಗಿವೆ. ಉದ್ಯೋಗ ಸೃಷ್ಟಿಯಾಗದೆ ಯುವ ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಕಾರ್ಪೊರೇಟ್ ಕಂಪೆನಿಗಳ ೨.೫೫ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆಯಿಂದ ಪಾರು ಮಾಡುವ ಯೋಜನೆಗಳನ್ನು ತರುತ್ತಿಲ್ಲ ಎಂದು ಆರೋಪಿಸಿದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಹಲವು ವರ್ಷಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಅಧಿಕಾರ ಜನತೆಗೆ ಇದೆ. ಹೀಗಾಗಿ ಎಲ್ಲರೂ ಮುಷ್ಕರದಲ್ಲಿ ಪಾಲ್ಗೊಂಡು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ೫೦ ಲಕ್ಷಕ್ಕೂ ಅಧಿಕ ಕಾಯಂ ಹುದ್ದೆಗಳು ಖಾಲಿ ಇವೆ. ಇದರಿಂದ ಹಾಲಿ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಮತ್ತೊಂದೆಡೆ ನಿರುದ್ಯೋಗಿ ಯುವಕರು ದುಡಿಮೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಖಾಸಗಿ ಕಂಪೆನಿಗಳು ನಿರುದ್ಯೋಗಿ ಯುವಕರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಂಡು ಶೋಷಣೆ ಮಾಡುತ್ತಿವೆ ಎಂದು ಕಾರ್ಮಿಕ ಮುಖಂಡರು ದೂರಿದರು.

ಕೇಂದ್ರ ಸರ್ಕಾರ ಪ್ರತಿ ತಿಂಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ಇದರಿಂದ ಟ್ರಾವೆಲ್ಸ್ ಏಜೆನ್ಸಿಗಳ ಮಾಲೀಕರಿಗೆ ಹಾಗೂ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರತಿ ಬಾರಿ ತೈಲೋತ್ಪನ್ನಗಳ ಬೆಲೆಯಲ್ಲಿ ಏರಿಕೆಯಾದಾಗ ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಸ್.ವೆಂಕಟಾಚಲಯ್ಯ ಹೇಳಿದರು.

ಗ್ರಾಮೀಣ ಬಡವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಆದರೆ ಈ ಯೋಜನೆಗೆ ಕೇಂದ್ರ ಸರ್ಕಾರ ನೀಡುವ ಬದಲು ಕೈಬಿಡುವ ಚಿಂತನೆ ನಡೆಸಿದೆ. ಯೋಜನೆ ಅಡಿ ಕಾರ್ಮಿಕರಿಗೆ ೧೦೦ ದಿನಗಳ ಕೆಲಸ ನೀಡುತ್ತಿಲ್ಲ. ಬದಲು ೧.೪೦ ಕೋಟಿ ಕುಟುಂಬಗಳಿಗೆ ಉದ್ಯೋಗ ನಿರಾಕರಿಸಲಾಗಿದೆ ಎಂದು ಪ್ರತಿಭಟನಾ ನಿರತ ರೈತ ಮುಖಂಡರು ಆಪಾದಿಸಿದರು.

ಆಟೋ ಚಾಲಕರು:  ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ  ಆಟೋ ಚಾಲಕರು  ಭಾರತ್ ಬಂದ್ ನಲ್ಲಿ ಪಾಲ್ಗೊಂಡಿದ್ದೇವೆ ಎಂದು ಆಟೋ ಯೂನಿಯನ್ ಮುಖಂಡ ರಾಜೇಶ್ ತಿಳಿಸಿದರು.

ಸಂಚಾರ ದಟ್ಟಣೆ..!

ಕಾರ್ಮಿಕ ಸಂಘಟನೆಯ ಸಾವಿರಾರು ಸದಸ್ಯರು, ನಗರದಲ್ಲೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಣಾಮ, ಸಂಚಾರ ದಟ್ಟಣೆ ಬಿಸಿ, ವಾಹನ ಸವಾರರಿಗೆ ತಟ್ಟಿತು. ಇಲ್ಲಿನ ಜೆಸಿ ರಸ್ತೆ, ಮೈಸೂರು ಬ್ಯಾಂಕ್ ಸುತ್ತಲೂ ಹಾಗೂ ಕೆಜಿ ರಸ್ತೆ ವ್ಯಾಪ್ತಿಯಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಕಂಡಿತು.

ಪೌರ ಕಾರ್ಮಿಕರು ಭಾಗಿ

ಕಾರ್ಮಿಕ ಹಕ್ಕುಗಳಿಗೆ ಕರೆ ನೀಡಿದ್ದ, ರಾಷ್ಟ್ರ ವ್ಯಾಪ್ತಿಯ ಮುಷ್ಕರದಲ್ಲಿ ಬಿಬಿಎಂಪಿ ಪೌರ ಕಾರ್ಮಿಕರು ಪಾಲ್ಗೊಂಡು, ಕನಿಷ್ಢ ವೇತನ ನಿಗದಿ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

Leave a Comment