ಕಾರ್ಮಿಕರ ದುಡಿಮೆಯೇ ಮೂಲಭೂತ ಸೌಕರ್ಯಗಳ ಸ್ಥಾಪನೆಗೆ ಕಾರಣ

ದಾವಣಗೆರೆ.ಮೇ.15; ಕಾರ್ಮಿಕರ ತಮ್ಮ ಅಹರ್ನಿಶಿ ದೈಹಿಕ ದುಡಿಮೆಯಿಂದಾಗಿ ಸಮಾಜದ ಮೂಲಭೂತ ಸೌಕರ್ಯಗಳ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳು ಹಾಗೂ ಅವುಗಳ ಬಗ್ಗೆ ಮಾಹಿತಿ ನೀಡಬೇಕಾದುದು ಕಾರ್ಮಿಕ ಇಲಾಖೆಯ ಕರ್ತವ್ಯವಾಗಿದೆ ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈ. ಚಂದ್ರಕಲಾ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಮಯೂರ ಆಪರೆಲ್ಸ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದಲ್ಲಿರುವ ಕರೂರು ಇಂಡಸ್ಟ್ರೀಯಲ್ ಏರಿಯಾದಲ್ಲಿನ ಮಯೂರ ಆಪರೆಲ್ಸ್‍ನಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕ ಕಾನೂನುಗಳು ಹಾಗೂ ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನತೆ ಕಾನೂನು ಚೌಕಟ್ಟಿನಲ್ಲಿ ನಡೆದಾಗ ಅವರಿಗೆ ಕಾನೂನು ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಮಹಿಳಾ ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಆರ್ಥಿಕ ಸಬಲತೆಗೆ, ಕುಟುಂಬ ನಿರ್ವಹಣೆಗೆ ದುಡಿಯುತ್ತಿದ್ದು, ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸುರಕ್ಷತೆ, ಭದ್ರತೆ, ವೇತನ ಮತ್ತು ಪರಿಹಾರಗಳ ಬಗ್ಗೆ ತಿಳಿಸುವುದು ಅವಶ್ಯಕವಾಗಿದೆ. ಕಾರ್ಮಿಕರು ತಮ್ಮ ಕೆಲಸಗಳಿಗೆ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಇರುವ ವಾಹನಗಳಲ್ಲಿ ಪ್ರಯಾಣಿಸಬೇಕು. ಸರಕು ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರವಾಗಿದ್ದು, ಅವಘಡ ಅಪಘಾತಗಳಿಗೆ ಕಾನೂನಿನಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇಂದು ಮಹಿಳೆಯರು ಕೈಗಾರಿಕೆ, ಆಸ್ಪತ್ರೆ, ಶಾಲಾ-ಕಾಲೇಜು, ಕಾರ್ಖಾನೆ, ಗಣಿ ಮತ್ತು ಚಹಾ ತೋಟಗಳಲ್ಲಿ ದುಡಿಯುತ್ತಿದ್ದು, ಇವರಲ್ಲಿ ಸಂಘಟಿತ ವಲಯದ ವ್ಯಾಪ್ತಿಗೆ ಬಂದ ಮಹಿಳಾ ಕಾರ್ಮಿಕÀರು ತಮ್ಮ ಸಂಘಟಿತ ಶ್ರಮಶಕ್ತಿಯ ಫಲವಾಗಿ ಪ್ರಯೋಜನಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದರು.
ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮಹಮದ್ ಜಹೀರ್ ಭಾಷಾ ಮಾತನಾಡಿ ಕಾರ್ಮಿಕರು ತಮ್ಮ ಕಾರ್ಖಾನೆ ಸೇರಿದಂತೆ ಇತರೆಡೆಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ತಮ್ಮ ಸುರಕ್ಷತೆಗಾಗಿ ಇರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ತಮಗೆ ಬರಬೇಕಾದ ನ್ಯಾಯಯುತ ವೇತನ, ಪಿಎಫ್, ಬೋನಸ್ ಸೇರಿದಂತೆ ಇತರೆ ಸೇವೆಗಳ ಬಗ್ಗೆ ಇಲಾಖೆಯಿಂದಲೂ ಮಾಹಿತಿ ಪಡೆದುಕೊಳ್ಳಬೇಕಾದುದು ಅಗತ್ಯ. ಮಹಿಳಾ ಕಾರ್ಮಿಕರಿಗಾಗಿ ಅಗತ್ಯವಾದ ವಾಹನ ಸೌಲಭ್ಯ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಇಂದು ಕಾರ್ಮಿಕ ಕ್ಷೇತ್ರ ಬಹುಪಾಲು ಅಸಂಘಟಿತರಿಂದಲೇ ಆವೃತಗೊಂಡಿದೆ. ಇಂದು ಸಂಘಟಿತ ಕಾರ್ಮಿಕ ವರ್ಗವು ತಂತ್ರಜ್ಞಾನ, ಬದಲಾಗುತ್ತಿರುವ ಉದ್ಯೋಗ ಲಕ್ಷಣ, ನವ ಉದಾರ ಆರ್ಥಿಕ ನೀತಿ, ಕಾರ್ಮಿಕ ಕಾನೂನು ಮಾರ್ಪಾಡಿನಿಂದ ಸವಾಲುಗಳನ್ನು ಎದುರಿಸುತ್ತಿದ್ದು, ಇವುಗಳ ಬಗ್ಗೆ ಕಾರ್ಮಿಕ ವರ್ಗಕ್ಕೆ ಅರಿವು ಮೂಡಿಸುವ ಅಗತ್ಯವಿದೆ. ಇಂದು ಇಡೀ ದೇಶವನ್ನೇ ಖಾಸಗೀಕರಿಸುವಂತಹ ಆರ್ಥಿಕ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ದೇಶದ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಸಂಘಟಿತ ಕಾರ್ಮಿಕರ ಕೊಡುಗೆ ಶೇ.45ರಷ್ಟು ಇದೆ. ಸಮೀಕ್ಷೆಗಳ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕಾರ್ಮಿಕರ ಸಂಖ್ಯೆ ಶೇ.35 ಆದರೂ, ಸಂಘಟಿತ ಕಾರ್ಮಿಕರ ಸಂಖ್ಯೆ ಶೇ.3 ಮಾತ್ರ. ನಗರ ಪ್ರದೇಶಗಳಲ್ಲಿ ಇರುವ ಎಲ್ಲಾ ಕಾರ್ಮಿಕರೂ ಕೂಡ ಸಂಘಟಿತರಾಗಿಲ. ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ಮೂಲಕ ಕಾರ್ಮಿಕ ವರ್ಗ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಿ ವ್ಯವಸ್ಥೆ ಗುರಿ ಮಟ್ಟಬೇಕಾಗಿದೆ ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ಸಾರಿಗೆ ನಿರೀಕ್ಷಕ ಮಹಮ್ಮದ್ ಖಾಲೀದ್‍ಸಾಬ್ ಅವರು ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅನುಗ್ರಹ ಗಾರ್ಮೆಂಟ್ಸ್‍ನ ಮಾಲೀಕರಾದ ರಘು ಮೊಸಳೆ, ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್, ಕಾರ್ಮಿಕರ ನಿರೀಕ್ಷಕರಾದ ಮುಮ್ತಾಜ್ ಬೇಗಂ, ವೇಮಣ್ಣ, ಯೋಜನಾ ನಿರ್ದೇಶಕ ಪ್ರಸನ್ನಕುಮಾರ್ ಮುಂತಾದವರು ಭಾಗವಹಿಸಿದ್ದರು.

Leave a Comment