ಕಾರ್ಮಿಕರ ಕಾಯ್ದೆ ಅನ್ವಯ ವೇತನ ಬಿಡುಗಡೆ

ಧಾರವಾಡ,ಆ.13-ಸುಮಾರು 20-25 ವರ್ಷಗಳಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ಹಾಗೂ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಬಹುದಿನಗಳ ಬೇಡಿಕೆಯಾದ ಕಾರ್ಮಿಕ ಇಲಾಖೆ ಕಾಯ್ದೆ ಅನ್ವಯ ನೂತನ ವೇತನ ಜಾರಿ ಮಾಡಿ ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ ಅವರು ಆದೇಶಿಸಿದ್ದಾರೆ
ಆದೇಶ ಹಣಕಾಸು ವಿಭಾಗಕ್ಕೆ ತಲುಪಿದ್ದು ಪ್ರಸ್ತುತ ತಿಂಗಳಿನಿಂದ ನೌಕರರು ನೂತನ ವೇತನವನ್ನು ಪಡೆಯಲಿದ್ದಾರೆ. ಇಂದು ಮಧ್ಯಾಹ್ನ ಕವಿವಿ ಆಡಳಿತ ಕಟ್ಟಡಕ್ಕೆ ಆಗಮಿಸಿದ್ದ ನೂರಾರು ನೌಕರರು ಕರ್ನಾಟಕ ವಿಶ್ವವಿದ್ಯಾಲಯ ಗುತ್ತಿಗೆ ನೌಕರರ ಸಂಘದಿಂದ ಕುಲಪತಿ ಪ್ರೊ. ಪ್ರಮೋದ ಗಾಯಿ, ಕುಲಸಚಿವ ಮಲ್ಲಿಕಾರ್ಜುನ ಪಾಟೀಲ, ಮೌಲ್ಯಮಾಪನ ಕುಲಸಚಿವ ಪ್ರೊ. ಎನ್. ವಾಯ್. ಮಟ್ಟಿಹಾಳ ಹಾಗೂ ವಿತ್ತಾಧಿಕಾರಿ ಆರ್. ಎಲ್. ಹೈದರಾಬಾದ ಅವರಿಗೆ ಹೂಗುಚ್ಚ, ಸಿಹಿ ನೀಡಿ ಅಭಿನಂದಿಸಿದರು.
ವಿಶ್ವವಿದ್ಯಾಲಯವು ಹೆಚ್ಚುವರಿಯಾಗಿ ಈ ಆರ್ಥಿಕ ಹೊರೆಯನ್ನು ಭರಿಸಿ ನೌಕರರ ಜೀವನಕ್ಕೆ ಅನುಕೂಲ ಕಲ್ಪಸಿದೆ. ಈ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕುಲಪತಿ ಪ್ರೊ. ಪ್ರಮೋದ ಗಾಯಿ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಮತ್ತು ಎಲ್ಲ ನಮ್ಮ ನೌಕರ ಸಿಬ್ಬಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ನಮ್ಮ ಬೇಡಿಕೆಗೆ ಮೊದಲ ಜಯ ಸಿಕ್ಕಿದ್ದು ಮುಂದಿನ ಹಂತದಲ್ಲಿ ನೌಕರರಿಗೆ ಸಂಚಿತ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಲು ವಿಶ್ವವಿದ್ಯಾಲಯಕ್ಕೆ ನಮ್ಮ ಸಂಘದಿಂದ ಮನವಿ ಸಲ್ಲಿಸಲಾಗಿದ್ದು ವಿಶ್ವವಿದ್ಯಾಲಯದ ಅಡಳಿತ ಮಂಡಳಿ ಬೆಂಬಲಿಸಿ ಇದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದೆ.
ನಮ್ಮ ಬಹುದಿನಗಳ ಬೇಡಿಕೆಗೆ ಮನ್ನಣೆ ನೀಡಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಗುತ್ತಿಗೆ, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಶ್ರೀ ಚೆನ್ನಬಸವರಾಜ ಮುದಕಣ್ಣವರ, ಉಪಾಧ್ಯಕ್ಷ ನಾಮದೇವ ಜಾಧವ, ಕಾರ್ಯದರ್ಶಿ ಶ್ರೀಮತಿ. ವೀಣಾ ಸೂರ್ಯವಂಶಿ, ಖಜಾಂಚಿ ಶ್ರೀಮತಿ ಶೈಲಾ ಬಡಿಗೇರ, ಶ್ರೀಮತಿ ವಿಮಲಾ ತಿವಾರಿ, ಸಹಾಯಕ ಕಾರ್ಯದರ್ಶಿ ಶ್ರೀ ಸೋಮಶೇಖರ ಇಂಡಿ, ಶ್ರೀ ಬಸವರಾಜ ಜಕ್ಕಣ್ಣವರ, ಶ್ರೀ. ಮಹೇಶ ಎಸ್ ಕಾಳಮ್ಮನವರ, ಶ್ರೀ ಅರುಣಕುಮಾರ ಚೋಳಪ್ಪನವರ, ಶ್ರೀ. ಫಕ್ಕೀರಪ್ಪ ತಳವಾರ, ಶ್ರೀ ರಮೇಶ ಕುಂಬಾರ,  ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment