ಕಾರ್ಮಿಕರ ಆಹಾರ ಕಿಟ್ ಕಾಂಗ್ರೆಸ್ ದುರ್ಬಳಕೆ: ಆರೋಪ

ಕುಣಿಗಲ್, ಮೇ ೨೫- ಕಾರ್ಮಿಕ ಇಲಾಖೆಯು ವಲಸೆ ಕಾರ್ಮಿಕ ವರ್ಗಕ್ಕೆ ನೀಡಲು ಸರ್ಕಾರ ಕಳುಹಿಸಿದ್ದ ಆಹಾರ ಧಾನ್ಯದ ಕಿಟ್‍ಗಳನ್ನು ಕಾಂಗ್ರೆಸ್ ಪಕ್ಷದ ಶಾಸಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಬಿ.ಎನ್.ಜಗದೀಶ್ ಡಿ.ನಾಗರಾಜಯ್ಯ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯು ತಾಲ್ಲೂಕಿನ ವಲಸೆ ಕಾರ್ಮಿಕ ವರ್ಗಕ್ಕೆ 3000 ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ನೀಡಿದ್ದು, ಇವುಗಳನ್ನು ತಾಲ್ಲೂಕು ಕಛೇರಿಯ ಕಂದಾಯ ಭವನದಲ್ಲಿ ಇಟ್ಟುಕೊಂಡು ತಾಲ್ಲೂಕು ಕಛೇರಿಯ ಶಿರಸ್ತೇದಾರ್ ಬೀಗ ಹಾಕಿ ಒಂದು ಕೀ ಯನ್ನ ತಮ್ಮ ಬಳಿ ಇಟ್ಟುಕೊಂಡು ಮತ್ತೊಂದು ಕೀ ಯನ್ನು ಶಾಸಕರ ಆಪ್ತ ಸಹಾಯಕನಿಗೆ ನೀಡಿರುತ್ತಾರೆ ಎಂದು ದೂರಿದರು.

ಶಾಸಕರು ತಮಗೆ ಇಷ್ಟ ಬಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ, ಬೆಂಬಲಿಗರಿಗೆ  ವಿತರಣೆ ಮಾಡುತ್ತಾ, ಸರ್ಕಾರದಿಂದ ಬಂದಂತಹ ಆಹಾರದ ಕಿಟ್‍ಗಳು ನಿಜವಾದ  ಕಾರ್ಮಿಕ ಫಲಾನುಭವಿಗಳಿಗೆ ನೀಡದೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಿದಾಗ ಸರ್ಕಾರದ ಕಿಟ್‍ಗಳು ಬಂದಿರುವುದು ತಮಗೆ ತಿಳಿದಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಾ, ಕಾರ್ಮಿಕ ಇಲಾಖೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿರುವ ನಿಜವಾದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ನೀಡಬೇಕಾದಂತಹ ಆಹಾರ ಕಿಟ್‍ಗಳನ್ನು ಕಾಂಗ್ರೆಸ್ ಪಕ್ಷದವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ತಾಲ್ಲೂಕು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ವಾಸು, ಈ.ಮಂಜು, ರಂಗಸ್ವಾಮಿ, ರಂಗಧಾಮಯ್ಯ, ಗುರುಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share

Leave a Comment