ಕಾರ್ತಿ ಚಿದಂಬರಂ ಆಸ್ತಿ ಮುಟ್ಟುಗೋಲು

ನವದೆಹಲಿ, ಅ. ೧೧- ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ, ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಪುತ್ರ ಕಾರ್ತಿಗೆ ಸೇರಿದ ಸುಮಾರು 54 ಕೋಟಿ ರೂ. ಗೂ ಅಧಿಕ ಆಸ್ತಿಪಾಸ್ತಿಯನ್ನು ಜಾರಿನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.
ಕಾರ್ತಿ ಚಿದಂಬರಂ ಒಡೆತನದಲ್ಲಿದ್ದ ದೆಹಲಿ, ಲಂಡನ್, ಪ್ಯಾರಿಸ್, ಸ್ಪೇನ್ ಸೇರಿದಂತೆ, ವಿವಿಧ ದೇಶಗಳಲ್ಲಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಕಾರ್ತಿಗೆ ಹಿನ್ನೆಡೆಯಾಗಿದೆ.
ಇತ್ತೀಚೆಗಷ್ಟೇ ಚಿದಂಬರಂ ಮತ್ತು ಕಾರ್ತಿ ಚಿದಂಬರಂ, ಸಿಬಿಐನಿಂದ ಬಂಧನ ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯದಿಂದ ನವೆಂಬರ್ 1ರತನಕ ಮಧ್ಯಂತರ ರಿಲೀಫ್ ಪಡೆದಿದ್ದರು.
ಇದೀಗ ಕಾರ್ತಿ ಅವರ ಅಪಾರ ಪ್ರಮಾಣದ ಆಸ್ತಿಪಾಸ್ತಿಯನ್ನು ವಶಕ್ಕೆ ಪಡೆದುಕೊಂಡಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಿಬಿಐ ಹಾಗೂ ಜಾರಿನಿರ್ದೇಶನಾಲಯ ಕಾರ್ತಿ ಚಿದಂಬರಂ ವಿರುದ್ಧ ಹಣ ಲೇವಾದೇವಿ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದೆ. ಇಂಗ್ಲೆಂಡ್‌ನ ಮನೆಗಳು, ಬಾರ್ಸಿಲೋನಾದ ಟೆನಿಸ್ ಕ್ಲಬ್, ತಮಿಳುನಾಡಿನ ಊಟಿ ಮತ್ತು ಕೊಡೆಕೆನಾಲ್‌ನ ಆಸ್ತಿ, ಸ್ಪೇನ್‌ನಲ್ಲಿರುವ ಆಸ್ತಿಗಳನ್ನು ಜಾರಿನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
2007 ರಲ್ಲಿ ನಡೆದ ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ, 305 ಕೋಟಿ ರೂ. ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
ಇದೀಗ ಜಾರಿನಿರ್ದೇಶನಾಲಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

Leave a Comment