ಕಾರ್ತಿಕ್ ಸುವರ್ಣ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಹಿಂಜಾವೇ ಆಗ್ರಹ

ಪುತ್ತೂರು, ಸೆ.೬- ಪುತ್ತೂರು ಸಂಪ್ಯಠಾಣಾ ಬಳಿಯಲ್ಲಿ ಮಂಗಳವಾರ ರಾತ್ರಿ ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ತಿಕ್ ಸುವರ್ಣ ಅವರನ್ನು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಮಾತ್ರ ಸಾಲದು. ಇದರ ಹಿಂದೆ ಇರುವ ಜಾಲದ ಬಗ್ಗೆ ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಹಿಂಜಾವೇ ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೆ.ಟಿ. ಆಗ್ರಹಿಸಿದರು.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕಾರ್ತಿಕ್ ಸುವರ್ಣ ಅವರು ಸಾತ್ವಿಕ ಸ್ವಭಾವದ ವ್ಯಕ್ತಿಯಾಗಿದ್ದು, ಹಿಂದೂ ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತ. ಆತ ಯಾವುದೇ ಸಮಾಜ ಕಂಟಕ ಕೆಲಸಗಳಲ್ಲಿ ತೊಡಗಿಕೊಂಡಿರಲಿಲ್ಲ. ಕೊಲೆಯ ಕಾರಣ ಇನ್ನೂ ನಿಗೂಢವಾಗಿದೆ. ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಈ ಕೊಲೆ ನಡೆದಿದೆ. ಅಂದರೆ ಕಾನೂನು ಪರಿಸ್ಥಿತಿ ಬಗ್ಗೆಯೂ ಪ್ರಶ್ನೆ ಉಂಟಾಗುತ್ತಿದೆ. ಇದರ ಹಿಂದೆ ವ್ಯಕ್ತಿ-ಶಕ್ತಿಗಳ ಕುಮ್ಮಕ್ಕು ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು. ಕಾರ್ತಿಕ್ ಭಾಗಿಯಾಗಿಲ್ಲದ ಪ್ರಕರಣವೊಂದರಲ್ಲಿ ಆತನನ್ನು ಸೇರಿಸಲಾಗಿತ್ತು. ಅಪರಾಧಿ ಚಟುವಟಿಕೆಗಳಲ್ಲಿ ಅಮಾಯಕರನ್ನು ಸಿಲುಕಿಸಿ ದರೆ ಭವಿಷ್ಯದಲ್ಲಿ ಅವರು ದುಷ್ಕರ್ಮಿಗಳಿಗೆ ಬಲಿಯಾಗುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.
ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ೯೪ ವರ್ಷಗಳ ಇತಿಹಾಸದ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಹಿಂದೂ ಜಾಗರಣ ವೇದಿಕೆ. ಇಂಥ ಸಂಘಟನೆಯಲ್ಲಿ ಬೆಳೆದು ಬಂದ ಕಾರ್ತಿಕ್‌ಗೆ ಯಾವುದೇ ಚಟ ಇರಲಿಲ್ಲ. ಗಣೇಶೋತ್ಸವದ ಚಪ್ಪರದಲ್ಲೇ ಈ ಕೊಲೆ ನಡೆದಿರುವುದು ನೋವಿನ ವಿಚಾರ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳ ಹಿಂದೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಬಳಕೆಯ ಕೈವಾಡ ಇರುವ ಬಗ್ಗೆ ಸಾಕಷ್ಟು ಗುಮಾನಿಗಳಿವೆ. ಇಲಾಖೆ ಒತ್ತಡಕ್ಕೆ ಒಳಗಾಗದೆ ಈ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ತಿಕ್ ಸುವರ್ಣ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಸೆ.೬ರಂದು ಸಂಜೆ ೫ ಗಂಟೆಗೆ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ನಡೆಯಲಿದೆ ಎಂದವರು ತಿಳಿಸಿದರು. ಗೋಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಪುತ್ತೂರು ತಾಲೂಕು ಅಧ್ಯಕ್ಷ ಸಚಿನ್ ರೈ ಪಾಪೆಮಜಲು ಹಾಜರಿದ್ದರು.

Leave a Comment