ಕಾರ್ಖಾನೆಗಳ ಧೂಳಿನಿಂದ ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

ಬಳ್ಳಾರಿ, ಜ.11:ಬಳ್ಳಾರಿ ತಾಲೂಕಿನ ವಿವಿಧೆಡೆಗಳಲ್ಲಿ ಸ್ಥಾಪಿತಗೊಂಡಿರುವ ಕಬ್ಬಿಣ ಹಾಗೂ ಮೆದುಕಬ್ಬಿಣ ಕಾರ್ಖಾನೆಗಳಿಂದ ಹೊರ ಹೊಮ್ಮುತ್ತಿರುವ ಧೂಳಿನಿಂದಾಗಿ ಬೆಳೆ ಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ಸಂಘಟನೆಗಳು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.

ಬಳ್ಳಾರಿ ಜಿಲ್ಲಾಧಿಕಾರಿಗಳಾದ ಡಾ||ವಿ.ರಾಂಪ್ರಸಾತ್ ಮನೋಹರ್ ಅವರು, ಮಂಗಳವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ದರೂರು ಪುರುಷೋತ್ತಮಗೌಡ ಮತ್ತು ಇತರರು ವಿವಿಧ ಕಾರ್ಖಾನೆಗಳಿಂದ ಹೊರಹೊಮ್ಮುತ್ತಿರುವ ಧೂಳು,ಹೊಲಸು, ತ್ಯಾಜ್ಯಗಳಿಂದಾಗಿ ಪರಿಸರ ಹಾನಿ ಬೆಳೆ ನಷ್ಟವಾಗುತ್ತಿದೆಯಲ್ಲದೇ, ವಿವಿಧ ರೋಗಗಳು ಕೂಡಾ ಹರಡುತ್ತಿವೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ವಿವಿಧ ಗ್ರಾಮಗಳ ಜನತೆ, ಪ್ರಮುಖರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತವು ರೈತರು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಜೊತೆ, ಕಾರ್ಖಾನೆಗಳ ಮಾಲೀಕರ ಸಭೆಯನ್ನು ನಿನ್ನೆ ಕರೆದಿದ್ದರು. ಆದರೆ ಈ ಸಭೆಯಲ್ಲಿ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕರು ಹಾಜರಾಗಿರಲಿಲ್ಲ. ಇದರಿಂದಾಗಿ ತೀವ್ರವಾಗಿ ಕೆರಳಿದ ರೈತ ಸಂಘದ ಧುರೀಣರು, ಕಾರ್ಖಾನೆ ಮಾಲೀಕರ ನಿರ್ಲಕ್ಷವನ್ನು ಖಂಡಿಸಿದರು.

ಈ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳಿನಿಂದ ಬೆಳೆಹಾನಿಗಳಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು. ಸ್ಥಳೀಯರಿಗೆ ನೌಕರಿ ಕೊಡಬೇಕು, ಈ ಕಾರ್ಖಾನೆಗಳ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಬೇಕು ಎಂದು ರೈತ ಸಂಘದ ಧುರೀಣರು, ಗ್ರಾಮಗಳ ಪ್ರಮುಖರು ಒತ್ತಾಯಿಸಿದರು.

ಜಿ.ಪುರುಷೋತ್ತಮಗೌಡ ಸೇರಿದಂತೆ ವೀರನಗೌಡ, ಶರಣನಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಗಂಗಾ ಧಾರವಾಡಕರ್, ಹಾಗೂ ಧುರೀಣರಾದ ಜಾಲಿಹಾಳ್ ಶ್ರೀಧರ್, ಮಲ್ಲಿಕಾರ್ಜುನ ನಾಯ್ಕ್, ಭೀಮಾನಾಯ್ಕ್, ಗಂಗೂನಾಯ್ಕ್, ಗಣಿನಾಯ್ಕ್ ಸೇರಿದಂತೆ ಇತರೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಡಾ|| ರಾಂ ಪ್ರಸಾತ್ ಮಾತನಾಡಿ, ಕಾರ್ಖಾನೆ ಮಾಲೀಕರ ಜೊತೆ ಮತ್ತೊಮ್ಮೆ ಚರ್ಚಿಸಲು ಸಭೆಗೆ ಕರೆಯುವುದಾಗಿ ತಿಳಿಸಿದರು. ಇಲಾಖೆಗಳ ಅಧಿಕಾರಿಗಳು ಕೂಡಾ ಪಾಲ್ಗೊಂಡಿದ್ದರು.

Leave a Comment