ಕಾರು ಪಲ್ಟಿ: ಒಬ್ಬ ಸಾವು, ಆರು ಜನರಿಗೆ ಗಾಯ

 

ಕಲಬುರಗಿ,ಡಿ.2-ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟು, ಇಬ್ಬರು ಮಕ್ಕಳು ಸೇರಿ ಆರು ಜನರು ಗಾಯಗೊಂಡ ಘಟನೆ ಕಮಲಾಪುರ ತಾಲ್ಲೂಕಿನ ಮರಗುತ್ತಿ ಕ್ರಾಸ್ ಹತ್ತಿರ ಇಂದು ಬೆಳಿಗ್ಗೆ 4.30ರ ಸುಮಾರಿಗೆ ನಡೆದಿದೆ.

ವಿಜಯಪುರ ನಗರದ ಬಂದೇನವಾಜ್ ಸೈಯದ್ ರಸೂಲ್ ಇನಾಮದಾರ್ (48) ಮೃತಪಟ್ಟವರು. ಚಾಲಕ ಅಕ್ಬರ್ ಸೈಯದ್ ಯುಸೂಫ್, ರುಬಿನಾ ಬಂದೇನವಾಜ್, ಅಪ್ಸರಾಬೇಗಂ ಸೈಯದ್ ಯುನೂಸ್, ಯಾಸ್ಮೀನ್ ಅಕ್ಬರ್ ಹುಸೇನ್ ಮತ್ತು ಮಕ್ಕಳಾದ ಅಲಿನಾ, ಮಹ್ಮದ್ ಜಾಗೀರ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೈದ್ರಾಬಾದನಲ್ಲಿರುವ ಸಂಬಂಧಿಕರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದುದ್ದರಿಂದ ಅವರ ಯೋಗಕ್ಷೇಮ ವಿಚಾರಿಸಲೆಂದು ಬಂದೇನವಾಜ್ ಇನಾಮದಾರ್ ಅವರು ಕುಟುಂಬದವರೊಂದಿಗೆ ವಿಜಯಪುರದಿಂದ ಹೈದ್ರಾಬಾದ್ ಗೆ ಕಾರಿನಲ್ಲಿ ಹೊರಟಿದ್ದರು. ಕಾರು ಮರಗುತ್ತಿ ಕ್ರಾಸ್ ಹತ್ತಿರ ಚಾಕಲನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಾರು ಒಂದುಬಾರಿ ಪಲ್ಟಿಯಾಗಿ ರಸ್ತೆ ಪಕ್ಕದ ಮರಕ್ಕೆ ತಗಲಿ ನೇರ ನಿಂತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದು ಕಮಲಾಪುರ ಪೊಲೀಸ್ ಠಾಣೆ ಪಿಎಸ್ಐ ಶೀಲಾದೇವಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Comment