ಕಾರು ಡಿಕ್ಕಿ ಬೈಕ್ ಸವಾರ ಶಂಕಾಸ್ಪದ ಸಾವು: ಪ್ರಿಯತಮೆ ಪಾರು

ಬೆಂಗಳೂರು,ಮಾ.೧೩-ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಅಣಕನೂರು ಗೇಟ್ ಬಳಿ ನಡೆದಿದೆ.

ಕಾಮಶೆಟ್ಟಿಹಳ್ಳಿ ಗ್ರಾಮದ ಆನಂದ್ (೨೬)ಮೃತಪಟ್ಟಿದ್ದು ಅಪಘಾತ ಪ್ರಕರಣವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದು ಅಪಘಾತ ಅಲ್ಲ ಕೊಲೆ ಎಂದು ಆರೋಪಿಸಲಾಗುತ್ತಿದೆ. ಬೈಕ್ ನ ಹಿಂಬದಿಯಲ್ಲಿದ್ದ ಆನಂದ್ ನ ಪ್ರಿಯತಮೆ ಗಾಯತ್ರಿ ಕೊಲೆ ಮಾಡಿ ಈ ರೀತಿ ಅಪಘಾತದ ನಾಟಕವಾಡುತ್ತಿದ್ದಾಳೆ ಎಂದು ಮೃತ ಆನಂದ್ ಸಂಬಂಧಿಕರು ದೂರಿದ್ದಾರೆ.

ಅಪಘಾತದಲ್ಲಿ ಗಾಯತ್ರಿಗೆ ಯಾವುದೇ ಗಾಯಗಳಾಗಿಲ್ಲ. ಇದರಿಂದ ಗಾಯತ್ರಿ ಮೇಲೆ ಅನುಮಾನ ಉಂಟಾಗಿದೆ.ಮೃತ ಆನಂದ್‌ಗೆ ಮದುವೆಯಾಗಿ ಮಗು ಇದ್ದರೂ ಗಂಡ ಬಿಟ್ಟಿದ್ದ ಗಾಯತ್ರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಗಾಯತ್ರಿ ನನ್ನ ಗಂಡ ಬಿಟ್ಟ ನಂತರ ನಾನು ಅನಂದ್ ೬ ವರ್ಷಗಳಿಂದ ಜೊತೆಯಾಗಿದ್ದೇವೆ. ಆದರೆ ಕಳೆದ ಒಂದು ತಿಂಗಳಿನಿಂದ ಆನಂದ್ ಹಾಗೂ ನನ್ನ ನಡುವೆ ವೈಮನಸ್ಸು ಉಂಟಾಗಿತ್ತು.ನಿನ್ನೆ ಚಿಕ್ಕಬಳ್ಳಾಪುರದಲ್ಲಿನನ್ನನ್ನು ಕಂಡ ಆನಂದ್ ಬೇರೋಬ್ಬರ ಜೊತೆ ನಿನಗೆ ಆಕ್ರಮವಿದೆ ಎಂದು ಜಗಳ ಮಾಡಿ ಹಲ್ಲೆ ಮಾಡಿ ಬೆದರಿಸಿ ನನ್ನನ್ನ ತನ್ನ ಬೈಕಿನಲ್ಲಿ ಕೂರಿಸಿಕೊಂಡು ಹೊರಟ ಬೈಕ್‌ನಿಂದ ಕೆಳಗಿಳಿದು  ಅಪ್ಪಿ ತಪ್ಪಿ ಓಡಿ ಹೋಗಬಾರದು ಎನ್ನುವ ಕಾರಣಕ್ಕೆ  ನಾನು ಹಾಕಿಕೊಂಡಿದ್ದ ವೇಲ್‌ನ್ನು ಆತನ ಸೊಂಟಕ್ಕೆ ಕಟ್ಟಿಕೊಂಡ. ಆದರೆ ಅಣಕನೂರು ಬಳಿ ನಾವು ತೆರಳುತ್ತಿದ್ದ ವೇಳೆ ಬೈಕಿಗೆ ಕಾರು ಡಿಕ್ಕಿ ಹೊಡೆಯಿತು. ತದನಂತರ ನನಗೆ ಪ್ರಜ್ಞೆ ತಪ್ಪಿದ್ದು ಅಮೇಲೆ ಏನಾಯಿತು ಎಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮತ್ತೊಂದೆಡೆ ಅಪಘಾತ ಮಾಡಿದ ಕಾರು ಸಹ ಕಾಣೆಯಾಗಿರುವುದು ಬಹಳಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Comment