ಕಾರು ಅಪಘಾತ ಸಚಿವ ಅಶೋಕ್ ಅಸ್ಪಷ್ಟ ಉತ್ತರ

ಬೆಂಗಳೂರು, ಫೆ. ೧೩- ಬಳ್ಳಾರಿಯ ಹೊಸಪೇಟೆ ಬಳಿ 3 ದಿನಗಳ ಹಿಂದೆ ನಡೆದ ಕಾರು ಅಪಘಾತ ಪ್ರಕರಣದ ದೂರಿನಲ್ಲಾಗಲಿ ಎಫ್‌ಐಆಱ್‌ನಲ್ಲಾಗಲಿ ತಮ್ಮ ಪುತ್ರನ ಹೆಸರಿಲ್ಲ ಎಂದು ಸ್ಪಷ್ಟಪಡಿಸಿರುವ ಕಂದಾಯ ಸಚಿವ ಆರ್. ಅಶೋಕ್,ಈ ಅಪಘಾತ ಪ್ರಕರಣವನ್ನು ತಿರುಚುವುದು ಸರಿಯಲ್ಲ ಎಂದಿದ್ದಾರೆ.

ಬಳ್ಳಾರಿಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯ ಸಮೀಪದ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಬೆಂಜ್ ಕಾರು ಗುದ್ದಿ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವ್ಯಕ್ತಿ ಹಾಗೂ ಕಾರಿನಲ್ಲಿದ್ದ ಯುವಕ ಮೃತಪಟ್ಟಿದ್ದರು. ಈ ಕಾರನ್ನು ಕಂದಾಯಸಚಿವ ಆರ್. ಅಶೋಕ್ ಪುತ್ರ ಶರತ್ ಚಲಾಯಿಸುತ್ತಿದ್ದರು ಎಂಬ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಅಪಘಾತಕ್ಕೀಡಾದ ಕಾರಿಗೂ ನನಗೂ ಸಂಬಂಧವಿಲ್ಲ ಎಂದರು.

ಈ ಕಾರಿನಲ್ಲಿ ನಿಮ್ಮ ಪುತ್ರ ಇದ್ದರೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಅವರು, ದೂರಿನ ಪ್ರತಿಯಲ್ಲಾಗಲಿ, ಎಫ್‌ಐಆರ್‌ನಲ್ಲಾಗಲಿ ತಮ್ಮ ಪುತ್ರನ ಹೆಸರಿಲ್ಲ ಎಂದಷ್ಟೆ ಹೇಳಿದರು.
ಈ ಅಪಘಾತ 3 ದಿನಗಳ ಹಿಂದೆ ನಡೆದಿದೆ. ಪ್ರಕರಣದ ತನಿಖೆ ನಡೆದಿದೆ. ಈ ಹಂತದಲ್ಲಿ ಹೆಚ್ಚು ಮಾತನಾಡುವುದು ಸರಿಯಲ್ಲ ಎಂದ ಅವರು, ಅಪಘಾತ ಪ್ರಕರಣವನ್ನು ತಿರುಚುವುದು ಸರಿಯಲ್ಲ ಎಂದರು.

ಈ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬ ಕಾರಿನಲ್ಲಿದ್ದ ಯುವಕ, ಮತ್ತೊಬ್ಬರು ರಸ್ತೆಬದಿ ಟೀ ಕುಡಿಯುತ್ತಿದ್ದ ವ್ಯಕ್ತಿ, ಇದು ನೋವಿನ ಸಂಗತಿ ಎಂದರು. ಕಾನೂನಿಗಿಂತ ಯಾರೂ ದೊಡ್ಡವರಲ್ಲ,ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಾನಂತೂ ತನಿಖೆಯಲ್ಲಿ ಮಧ್ಯ ಪ್ರವೇಶಿಸಲ್ಲ ಎಂದರು.

ಈ ಪ್ರಕರಣದಲ್ಲಿ ತಾವುರಾಜಕಾರಣ ಮಾಡಲು ಬಯಸುವುದಿಲ್ಲ.ಅಪಘಾತ ನಡೆದ ನಂತರ ಸ್ಥಳೀಯರೇ ದೂರು ದಾಖಲಿಸಿದ್ದಾರೆ. ಹಾಗೆಯೇ,ಕಾರಿನಲ್ಲಿದ್ದವರನ್ನು ಸ್ಥಳೀಯ ಜನರೇ ಆಸ್ಪತ್ರೆಗೂ ದಾಖಲಿಸಿದ್ದಾರೆ. ದೂರಿನಲ್ಲಾಗಲಿ, ಎಫ್‌ಐಆರ್‌ನಲ್ಲಿ ಮಗನ ಹೆಸರಿಲ್ಲ ಎಂದು ಪುನರುಚ್ಛರಿಸಿದರು. ಅಪಘಾತವಾದ ಕಾರಿಗೂ ಅದು ನೋಂದಣಿ ಹೊಂದಿರುವ ಸಂಖ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.

ಏನಿದು ಪ್ರಕರಣ?
ಕಳೆದ ಸೋಮವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮರಿಯಮ್ಮನ ಪಾಳ್ಯದ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗದಲ್ಲಿ ಬಂದ ಬೆಂಜ್ ಕಾರು (ಕಾರಿನ ಸಂಖ್ಯೆ ಕೆಎ-05ಎಂಡಬ್ಲ್ಯು0357) ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ಚಹದ ಅಂಗಡಿ ಬಳಿ ನಿಂತಿದ್ದ ರವಿನಾಯಕ್ (19) ಅವರಿಗೆ ಗುದ್ದಿದೆ. ನಂತರ ಕಾರು ಸುಮಾರು 100 ಮೀ.ವರೆಗೂ ರವಿ ಅವರನ್ನು ತಳ್ಳಿಕೊಂಡು ಹೋಗಿದೆ ಎಂದು ಹೇಳಲಾಗಿದೆ.

ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮತ್ತಿಕೆರೆ ನಿವಾಸಿ ಸಚಿನ್ ಮೃತಪಟ್ಟಿದ್ದಾರೆ. ಈ ಕಾರು ಉತ್ತರಳ್ಳಿ ಬ್ರಾಂಚ್‌ನ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಹೆಸರಿನಲ್ಲಿ ನೋಂದಾವಣಿಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಅಪಘಾತ ನಡೆದ ತಕ್ಷಣ ಸ್ಥಳೀಯರು ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರೂ ಸಹ ದೂರು ದಾಖಲಿಸಿದ್ದು, ಬೆಂಗಳೂರಿನ ಜಾಲಹಳ್ಳಿಯ ರಾಹುಲ್ (29) ಎ ಒನ್ ಆರೋಪಿಯಾಗಿದ್ದಾನೆ. ಈತನೇ ಕಾರು ಚಾಲನೆ ಮಾಡುತ್ತಿದ್ದ ಎಂದು ಪ್ರಕರಣ ದಾಖಲಿಸಿದ್ದಾರೆ. ರಾಹುಲ್‌ನ ತಂದೆ ಸಚಿವ ಅಶೋಕ್ ಅವರ ಆಪ್ತರು ಎನ್ನಲಾಗಿದೆ.

Leave a Comment