ಕಾಯಕಯೋಗಿ ಶಿವರಾಜ ಪಾಟೀಲ್‌ಗೆ 80ರ ಸಂಭ್ರಮ

-ಡಾ. ಅಮರೇಶ ಯತಗಲ್

ಗೌರವಾನ್ವಿತ ನ್ಯಾಯಮೂರ್ತಿ ಶಿವರಾಜ ಪಾಟೀಲರು ಈ ರಾಷ್ಟ್ರ ಕಂಡ ಅದಮ್ಯ ಶಕ್ತಿ, ಸೌಜನ್ಯ, ಸಜ್ಜನಿಕೆ ಹಾಗೂ ಪಾಂಡಿತ್ಯದೊಂದಿಗೆ ಬದುಕಿನ ಮೌಲ್ಯಗಳ ಔನ್ನತ್ಯವನ್ನು ಕಂಡ ಪ್ರಾಂಜಲ ಮನಸ್ಸಿಗರು. ಜೀವನೋತ್ಸಾಹ, ಅಚಲ ನಂಬಿಕೆ ಹಾಗೂ ಕರ್ತವ್ಯ ಪ್ರಜ್ಞೆಯ, ಸತ್ಯ-ಶುದ್ಧ ಕಾಯಕದೊಂದಿಗೆ ’ಕಾಯಕಯೋಗಿ’ ಹಾಗೂ ’ನ್ಯಾಯರತ್ನ’ರೆಂದೇ ಖ್ಯಾತರಾದವರು. ನ್ಯಾಯಶಾಸ್ತ್ರಜ್ಞರಾಗಿ, ಮಾನವತಾವಾದಿಗಳಾಗಿ, ಬರಹಗಾರರಾಗಿ ಹಾಗೂ ಸಮಾಜಮುಖಿ ಚಿಂತಕರಾಗಿ ಈ ನಾಡಿನ ಹಿರಿಮೆಯನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು. ಸುಪ್ರೀಂ ಕೋರ್ಟ್‌ನ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತಿ ಹೊಂದಿ, ರಾಷ್ಟ್ರ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ಹಂಗಾಮಿ ಅಧ್ಯಕ್ಷರಾಗಿ ಗಂಧದಂತೆ ತಮ್ಮ ಬದುಕನ್ನು ಸವೆಯಿಸಿ, ಹಣತೆಯಂತೆ ಪ್ರಕಾಶಿಸಿದರಲ್ಲದೆ, ಸದಾ ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಶಿವರಾಜ ಪಾಟೀಲ ಅವರು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಎಂಬ ಕುಗ್ರಾಮದಲ್ಲಿ ೧೨ನೇ ಜನವರಿ, ೧೯೪೦ ರಲ್ಲಿ ಜನಿಸಿದರು. ತಂದೆ ವಿರುಪಣ್ಣ ಪಾಟೀಲರು, ಇವರು ವೃತ್ತಿಯಲ್ಲಿ ಕೃಷಿಕರು. ಸುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದರು. ತಾಯಿ ಮಲ್ಲಮ್ಮನವರು, ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಈ ದಂಪತಿಗಳಿಗೆ ನಾಲ್ಕು ಜನ ಮಕ್ಕಳು. ಅವರಲ್ಲಿ ಮೂವರು ಹೆಣ್ಣುಮಕ್ಕಳು ಹಾಗೂ ಒಂದು
ಗಂಡುಮಗು, ಅವರೇ ಶಿವರಾಜ ವಿ. ಪಾಟೀಲರು. ಪಾಟೀಲರು ಎರಡು ವರ್ಷದವರಿರುವಾಗಲೇ ೧೯೪೨ ರಲ್ಲಿ ತಾಯಿ ಮಲ್ಲಮ್ಮನವರು ಅಕಾಲಿಕವಾಗಿ ಲಿಂಗೈಕ್ಯರಾದರು. ಕಿರುವಯಸ್ಸಿನಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ತಮ್ಮ ಸಹೋದರಿಯರಾದ ಶ್ರೀಮತಿ ಗಂಗಮ್ಮ, ಕಮಲಮ್ಮ ಹಾಗೂ ಈಶಮ್ಮನವರ ಜೊತೆಯಲ್ಲಿ ಬೆಳೆದರು.

shivaraj-patil1
ಇವರ ಪ್ರಾಥಮಿಕ ಶಿಕ್ಷಣವು ಹುಟ್ಟೂರಾದ ಮಲದಕಲ್‌ನಲ್ಲಿ, ಮಾಧ್ಯಮಿಕ ಶಿಕ್ಷಣವು ರಾಯಚೂರಿನ ಹಮ್‌ದರ್ದ್ ಪ್ರೌಢಶಾಲೆಯಲ್ಲಿ ನಡೆಯಿತು. ಒಂದು ಸಲ ತಮ್ಮೂರಾದ ಮಲದಕಲ್‌ನಿಂದ ರಾಯಚೂರಿಗೆ ಬರಬೇಕಾಗಿತ್ತು, ಅಂದು ಬಸ್ಸುಗಳಿರಲಿಲ್ಲ. ರಾತ್ರಿಯಿಡೀ ಹತ್ತಿಯನ್ನು ಹೊತ್ತ ಬಂಡಿಗಳು ರಾಯಚೂರಿಗೆ ಬರುತ್ತಿದ್ದವು. ಇವರು ಆ ಬಂಡಿಯಲ್ಲಿ ಕುಳಿತು ರಾಯಚೂರಿಗೆ ಬಂದಿದ್ದರು. ಇಂತಹ ಘಟನೆಗಳು ಅದೆಷ್ಟೋ! “ಇಂಥ ಕಷ್ಟಗಳು ತಮ್ಮ ಬೆಳವಣಿಗೆಗೆ ಎಂದೂ ಅಡ್ಡಿಯಾಗಲಿಲ್ಲ” ಎಂದು ನ್ಯಾಯಮೂರ್ತಿ ಪಾಟೀಲರು ಅಭಿಮಾನದಿಂದ ಹೇಳುತ್ತಾರೆ.
ವಿದ್ಯಾಭ್ಯಾಸಕ್ಕೆ ಅನಾನುಕೂಲಗಳಿದ್ದರೂ ಓದಲೇಬೇಕು, ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಬೇಕು, ಏನಾದರೂ ಸಾಧಿಸಬೇಕು ಎಂಬ ಛಲ ಇವರಲ್ಲಿ ಮಡುವಾಗಿ ನಿಂತಿತ್ತು. ಪ್ರತಿ ಹಂತದಲ್ಲೂ ಬರುವ ಅಡೆತಡೆಗಳನ್ನು ಮೆಟ್ಟಿನಿಂತರಲ್ಲದೆ, ನಿರಂತರ ಪ್ರಾಮಾಣಿಕ ಪ್ರಯತ್ನದೊಂದಿಗೆ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು.
ಬಿಎಸ್‌ಸಿ ಪದವಿಯನ್ನು ಮುಗಿಸಿ ತಮ್ಮ ಊರಿನಲ್ಲಿ ಪದವಿ ಪಾಸಾದವರಲ್ಲಿ ಇವರೇ ಮೊದಲಿಗರು. ಅಲ್ಲದೆ, ನಂತರದಲ್ಲಿ ಕಲಬುರಗಿಯ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದ ಪೂಜ್ಯಶ್ರೀ ದೊಡ್ಡಬಸಪ್ಪ ಅಪ್ಪರ ಕೃಪೆಗೆ ಪಾತ್ರರಾಗಿ ಅವರ ದಾಸೋಹ ನಿಲಯದಲ್ಲಿ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡರು. ತದನಂತರದಲ್ಲಿ ಕಲಬುರಗಿಯ ಸೇಠ್ ಶಂಕರ್‌ಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯಕ್ಕೆ ಕಾನೂನು ವಿದ್ಯಾರ್ಥಿಯಾಗಿ ಸೇರಿ ಪದವಿಯನ್ನು ಮುಗಿಸಿದರು.
೨೫ನೇ ಜುಲೈ, ೧೯೬೨ ರಿಂದ ೧ನೇ ಜನವರಿ ೧೯೭೯ರವರೆಗೆ ನ್ಯಾಯವಾದಿಯಾಗಿ, ಜನಮಾನಸದಲ್ಲಿ ಹೆಸರು ಗಳಿಸಿದರು. ನ್ಯಾಯವಾದಿ ವೃತ್ತಿಯ ಜೊತೆಯಲ್ಲಿಯೇ, ಕಲಬುರಗಿಯ ಸೇಠ್ ಶಂಕರ್‌ಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ೧೯೬೭ ರಿಂದ ೧೯೭೫ರವರೆಗೆ ಅರೆಕಾಲಿಕ ಉಪನ್ಯಾಸಕರಾಗಿ, ೧೯೭೫ರಿಂದ ೧೯೭೮ರವರೆಗೆ ಗೌರವ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ಇವರು ತಮ್ಮ ವಕೀಲಿ ವೃತ್ತಿಯಲ್ಲಿನ ಮೊದಲ ದಿನಗಳ ಪ್ರಕರಣಗಳನ್ನು ಇಂದಿಗೂ ಮರೆತಿಲ್ಲ. ಇವರ ಮೊದಲ ದಿನಗಳ ಕಕ್ಷಿದಾರ, ಕಲಬುರಗಿ ತಾಲೂಕಿನ ಕುಸನೂರು ಎಂಬ ಹಳ್ಳಿಯ ಅಮಂತ್ಯಪ್ಪ ಸಿದ್ದಪ್ಪ ಲಾಡ್ ಚಿಂಚೋಳಿ ಎಂಬ ದಲಿತ ಇವರ ಮನದಾಳದಲ್ಲಿ ಇಂದಿಗೂ ಚಿರಸ್ಥಾಯಿಯಾಗಿದ್ದಾನೆ. ಈತ ಹೊಲದ ಕೇಸೊಂದನ್ನು ನೀಡಿದಾಗ ಇವರು ಕೇವಲ ೫೦ ರೂಪಾಯಿಗಳ ಫೀಯನ್ನು ಮಾತ್ರ ಅಮಂತ್ಯಪ್ಪನಿಂದ ಪಡೆದರು. ಆಳಂದದ ಸಿವಿಲ್ ನ್ಯಾಯಾಲಯದಲ್ಲಿ ಕೇಸು ನಡೆದು ಗೆದ್ದಿತು. ಆದರೆ ಪ್ರತಿವಾದಿಗಳು ಜಿಲ್ಲಾ ನ್ಯಾಯಾಲಯದ ಮೊರೆಹೋದರು. ಮತ್ತೆ ಇವರ ಸಮರ್ಥನೆಯ ವಾದ ಅಮಂತ್ಯಪ್ಪನವರ ಕೇಸನ್ನು ಗೆಲ್ಲಲು ಸಹಾಯಕವಾಯಿತು. ನಂತರ ಪ್ರತಿವಾದಿಗಳು ಹೈಕೋರ್ಟ್‌ನ ಉಚ್ಚನ್ಯಾಯಾಲಯದ ಮೊರೆ ಹೋದರು. ಅಲ್ಲಿಯೂ ನ್ಯಾಯಮೂರ್ತಿ ಪಾಟೀಲರು ಈ ಕೇಸನ್ನು ಸವಾಲಾಗಿ ಸ್ವೀಕರಿಸಿ ಜಯ ಸಾಧಿಸಿದರು.
ವಕೀಲಿ ವೃತ್ತಿಯಿಂದ ನ್ಯಾಯಾಧೀಶರ ಹುದ್ದೆಯವರೆಗೂ ವೃತ್ತಿಯ ಬಗೆಗೆ ಅಪಾರ ಅಭಿಮಾನವನ್ನು ತೋರಿದವರು. ಕೈಗೆತ್ತಿಕೊಂಡ ಪ್ರತಿ ಕೇಸಿಗೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಕಾನೂನಿನ ಅಂಶಗಳನ್ನು ಕೂಲಂಕುಶವಾಗಿ ಅಭ್ಯಸಿಸಿ; ಪರಿಶೀಲಿಸಿ, ಮಾನವೀಯ ದೃಷ್ಟಿಯನ್ನಿಟ್ಟುಕೊಂಡು ಅನೇಕ ಕೇಸುಗಳಿಗೆ ಉತ್ತಮ ತೀರ್ಪು ಕೊಡುವಲ್ಲಿ ಯಶಸ್ವಿಯಾದವರು. ಇದಕ್ಕೆ ಇವರ ಪಾಂಡಿತ್ಯ, ಪರಿಶ್ರಮ ಹಾಗೂ ಅನುಕಂಪಗಳೇ ಕಾರಣವಾಗಿವೆ. ಜನವರಿ ೧೧, ೨೦೦೫ ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತಿಯಾದರು.
ನಂತರ ಇವರ ಪ್ರತಿಭೆ ಹಾಗೂ ಅಮೋಘ ಸೇವೆಯನ್ನು ಗುರುತಿಸಿದ ಕೇಂದ್ರ ಸರಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿತು. ನಂತರ ನವೆಂಬರ್ ೧, ೨೦೦೬ ರಿಂದ ಮೇ ೧, ೨೦೦೭ರವರೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಅನೇಕ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ೪ನೇ ಫೆಬ್ರುವರಿ, ೨೦೦೮ ರಲ್ಲಿ ನಿವೃತ್ತರಾದರು. ನಂತರ ಡಿಸೆಂಬರ್ ೧೩, ೨೦೧೦ ರಿಂದ ಜನವರಿ ೩೧, ೨೦೧೧ ರಂದು ಭಾರತ ಸರ್ಕಾರದ ೨ಜಿ ಸ್ಪೆಕ್ಟ್ರಂ ತನಿಖೆಯ ಏಕವ್ಯಕ್ತಿ ಸಮಿತಿಯ ಅಧ್ಯಕ್ಷರಾಗಿ, ಡಿಸೆಂಬರ್ ೨೧, ೨೦೧೦ ರಿಂದ ಜೂನ್ ೩೦, ೨೦೧೧ರವರೆಗೆ ಕರ್ನಾಟಕ ಸರ್ಕಾರದ ಬಾಲ್ಯವಿವಾಹ ತಡೆಗಟ್ಟುವ ಕುರಿತು ರಚಿಸಿದ ಕೋರ್‌ಕಮಿಟಿಯ ಅಧ್ಯಕ್ಷರಾಗಿ, ಆಗಸ್ಟ್ ೩, ೨೦೧೧ ರಿಂದ ಸೆಪ್ಟೆಂಬರ್ ೧೯, ೨೦೧೧ರವರೆಗೆ ಕರ್ನಾಟಕ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದರು.
ನ್ಯಾಯಮೂರ್ತಿ ಶಿವರಾಜ ಪಾಟೀಲರ ಕುಟುಂಬ ತುಂಬು ಹೃದಯ ಶ್ರೀಮಂತಿಕೆಯದು.
ಇವರದು ಪರಿಪೂರ್ಣ ಕುಟುಂಬ ಒಟ್ಟು ಮೂರು ಜನ ಮಕ್ಕಳು. ಡಾ. ಶರಣ ಪಾಟೀಲ, ಶ್ರೀಮತಿ ಮಾಲತಿ ಪಟೇಲ್ ಹಾಗೂ ಶ್ರೀ ಬಸವ ಪ್ರಭು ಪಾಟೀಲ. ’ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು’ ಎಂಬಂತೆ ಇವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ, ಎಲ್ಲರ ಪಾಲನೆ-ಪೋಷಣೆ ಮಾಡಿ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ಶ್ರೀಮತಿ ಅನ್ನಪೂರ್ಣದೇವಿ ಅವರು ಆಚಾರ – ವಿಚಾರದಲ್ಲಿ, ನಡೆ-ನುಡಿಗಳಲ್ಲಿ ಶರಣ ಧರ್ಮದ ತತ್ವ – ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನ್ಯಾಯಮೂರ್ತಿ ಪಾಟೀಲರ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಸ್ಥಾನವನ್ನಲಂಕರಿಸಿದ ಉತ್ತರ ಕರ್ನಾಟಕದ ಪ್ರಪ್ರಥಮ ವ್ಯಕ್ತಿ ಎಂಬ ಸಾರ್ವಕಾಲಿಕ ಹೆಗ್ಗಳಿಕೆಗೆ ಪಾತ್ರರಾಗಿರುವ ಶಿವರಾಜ. ವಿ. ಪಾಟೀಲರಿಗೆ ಜನವರಿ ೧೨ಕ್ಕೆ ೮೦ ವರ್ಷದ ತುಂಬು ಹರೆಯ ಸಹಜವಾಗಿಯೇ ಇದೊಂದು ಸಂಭ್ರಮ. ಇದಕ್ಕೆ ಸಜ್ಜಾಗಿದೆ ಬೆಂಗಳೂರು ನಗರ. ನ್ಯಾಯಾಂಗ ಕ್ಷೇತ್ರದ ಧ್ರುವತಾರೆಯಾಗಿ ರಾಜ್ಯದ ಕೀರ್ತಿಯನ್ನು ಬೆಳಗಿರುವ ಶಿವರಾಜ.ವಿ.ಪಾಟೀಲರು ಅನುಕರಣೀಯ, ಆದರ್ಶ ವ್ಯಕ್ತಿತ್ವ. ಅವರ ಮಾರ್ಗದರ್ಶನ ನಿರಂತರವಾಗಿ ಒದಗಿರಲಿ. ಅವರನ್ನು, ಅವರ ಸಮಸ್ತ ಕುಟುಂಬವನ್ನು ಭಗವಂತ ಚಿರಕಾಲ ಕರುಣಿಸಿ ಕಾಪಾಡಲಿ.

Leave a Comment