ಕಾಮಾಲೆ ಸಿಎಂಗೆ ಕಾಣೋದೆಲ್ಲಾ ಹಳದಿ

ಚಿಕ್ಕಬಳ್ಳಾಪುರ, ಜ. ೧೨- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಮಾಲೆ ರೋಗ ಬಂದಿರುವುದರಿಂದ ಕಾಣುವುದೆಲ್ಲಾ ಹಳದಿಯಾಗಿ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಡಿ.ವಿ ಸದಾನಂದಗೌಡ ಟೀಕಿಸಿದ್ದಾರೆ.
ಗೌರಿಬಿದನೂರಿನ ಖಾಸಗಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಗೆ ತೆರಳುವ ಅಂಚಿನಲ್ಲಿ ಅಸಭ್ಯವಾಗಿ ವರ್ತಿಸುತ್ತಾ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕಳೆಯುತ್ತಿದ್ದಾರೆ ಎಂದು ಹೇಳಿದರು.
೧೫೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಉತ್ತರ ಪ್ರದೇಶ, ಗುಜರಾತ್ ಮಾದರಿಯಲ್ಲಿ ಬಹುಮತದ ಸರ್ಕಾರ ರಾಜ್ಯದಲ್ಲಿ ಬರಲಿದೆ ಎಂದು ಹೇಳಿದ ಸದಾನಂದಗೌಡರು,ಮನೆಗೆ ಬೆಂಕಿ ಬಿದ್ದರೆ ಬೀಡಿ ಅಂಟಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿರುವ ಸಿದ್ದರಾಮಯ್ಯ, ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ಸಿಗರನ್ನು ಎತ್ತಿಕಟ್ಟಿ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಇದು ರಾಜ್ಯದ ರೈತರಿಗೆ ಅವರು ಮಾಡಿರುವ ಘೋರ ಅನ್ಯಾಯ ಎಂದು ಕಿಡಿಕಾರಿದರು.
ಸೋಲುವ ಭೀತಿಯಿಂದ ಸಂಯಮ ಕಳೆದುಕೊಂಡಿರುವ ಸಿದ್ದರಾಮಯ್ಯ, ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸಭ್ಯ ರಾಜಕಾರಣಕ್ಕೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಏನೇ ಮಾತನಾಡಿದರೂ ದಾಖಲೆಯಾಗುತ್ತದೆ. ಹಾಗಾಗಿ, ಅವರು ಮರ್ಯಾದೆ ಉಳಿಸಿಕೊಳ್ಳಲಿ ಎಂದು ಸದಾನಂದಗೌಡ ಸಲಹೆ ನೀಡಿದರು.

Leave a Comment