ಕಾಮನ್‌ವೆಲ್ತ್ ಕ್ರೀಡಾಕೂಟ ಭಾರತಕ್ಕೆ ಇನ್ನೂ ಆರು ಚಿನ್ನದ ಪದಕ

ಗೋಲ್ಡ್‌ಕೋಸ್ಟ್, ಏ. ೧೪- ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿರುವ ಕಾಮನ್‌‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಇಂದು 6 ಚಿನ್ನದ ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬಾಕ್ಸಿಂಗ್‌ನಲ್ಲಿ ಮೇರಿಕೋಮ್, ಗೌರವ್ ಸೋಲಂಕಿ, ಸಂಜೀವ್ ಸೋಲಂಕಿ, ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಹಾಗೂ 125 ಕೆಜಿ ಕುಸ್ತಿ ವಿಭಾಗದಲ್ಲಿ ಸುಮಿತ್ ಚಿನ್ನದ ಪದಕ ಗಳಿಸಿದ್ದಾರೆ. ಇದೇ ವೇಳೆ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೊಗಟ್ 50 ಕೆಜಿ ವಿಭಾಗದಲ್ಲಿ ಚಿನ್ನ ಗಳಿಸಿದ್ದಾರೆ.

ಒಟ್ಟು 48 ಪದಕಗಳನ್ನು ಗಳಿಸುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಕಾಯ್ದುಕೊಂಡು ಕ್ರೀಡಾಕೂಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೀರ್ತಿಗೆ ಭಾಜನವಾಗಿದೆ.

ಬೆಲ್‌ಮೋಂಟ್ ಶೂಟಿಂಗ್ ಸೆಂಟರ್‌ನಲ್ಲಿಂದು ನಡೆದ ಫೈನಲ್ ಪಂದ್ಯದಲ್ಲಿ ಪುರುಷ 50 ಮೀಟರ್ ರೈಫಲ್ ಮೂರು ವಿಭಾಗಗಳಲ್ಲಿ ಸಂಜೀವ್ ರಜಪೂತ್ 454.5 ಅಂಕಗಳನ್ನು ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

2014ರಲ್ಲಿ ಗ್ಲಾಸ್ಗೋದಲ್ಲಿ ಇದೇ ವಿಭಾಗದಲ್ಲಿ ನಡೆದಿದ್ದ ಪಂದ್ಯದಲ್ಲಿ ರಜಪೂತ್ ಬೆಳ್ಳಿ ಪದಕಗಳಿಸಿದ್ದರು. ಈಗ ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದುಕೊಂಡಿದ್ದಾರೆ.

ಅಂತಿಮ ಪಂದ್ಯದ ಅಖಾಡದಲ್ಲಿ ಮತ್ತೊಬ್ಬ ಭಾರತೀಯ ಶೂಟರ್ ಚೈನ್‌ಸಿಂಗ್ 419.1 ಅಂಕಗಳಿಸಿ 5ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.
ಮತ್ತೊಂದೆಡೆ ಭಾರತದ ಅಗ್ರಮಾನ್ಯ ಮಹಿಳಾ ಬಾಕ್ಸಿಂಗ್ ಪಲುಮೇರಿ ಕೋಮ್ 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಐಱ್ಲೆಂಡ್‌ನ ಕ್ರಿಸ್ಟೀನಾ ಓ ಹರಾ ಅವರನ್ನು 5-0 ಯಿಂದ ಮಣಿಸಿ ಚಿನ್ನ ಮುಡಿಗೇರಿಸಿಕೊಂಡರು.

ಅಂತಿಮ ಪಂದ್ಯದಲ್ಲಿ ಲೀಲಾಜಾಲವಾಗಿ ಎದುರಾಳಿಗೆ ಭರ್ಜರಿ ಪಂಚ್ ನೀಡುವ ಮೂಲಕ 35 ವರ್ಷದ ಮೇರಿಕೋಂ ಪ್ರಥಮ ಸ್ಥಾನಗಳಿಸುವಲ್ಲಿ ಸಫಲರಾದರು.

ಇದೇ ವೇಳೆ 125 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಸುಮಿತ್ ಮಲ್ಲಿಕ್, ಪಾಕಿಸ್ತಾನದ ತಯಾಬ್ ರಜಾ ಅವರನ್ನು 10-4 ಅಂಕಗಳಿಂದ ಸೋಲಿಸಿ ಚಿನ್ನ ತಮ್ಮದಾಗಿಸಿಕೊಂಡರು.

ಫೈನಲ್ ಪ್ರವೇಶಿಸಿದ್ದ ನೈಜೀರಿಯಾದ ಸಿನಿವೀ ಬೋಲ್ಟಿಕ್ ಗಾಯಾಳುವಾಗಿದ್ದರಿಂದ ಈ ಪಂದ್ಯದಿಂದ ಹೊರಗುಳಿದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತದ ಕುಸ್ತಿಪಟು ಜಯಭೇರಿ ಬಾರಿಸಿದ್ದಾರೆ.

ಈ ಮಧ್ಯೆ ಪುರುಷರ 52 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಗೌರವ್ ಸೋಲಂಕಿ ಚಿನ್ನಗಳಿಸಿದ್ದಾರೆ.

ಜಾವಲಿನ್‌ನಲ್ಲಿ ಚಿನ್ನ

ಇದೇ ಮೊದಲ ಬಾರಿಗೆ ಭಾರತದ ನೀರಜ್ ಚೋಪ್ರಾ ಜಾವಲಿನ್ ಎಸೆತದಲ್ಲಿ ಚಿನ್ನ ಗಳಿಸಿದ್ದಾರೆ. ಜಾವಲಿನ್‌ನಲ್ಲಿ ವಿಶ್ವದ ಅತ್ಯಂತ ಕಿರಿಯ ಆಟಗಾರನೆನೆಸಿರುವ ನೀರಜ್ ಜೋಪ್ರಾ, ಅಂತಿಮ ಪಂದ್ಯದಲ್ಲಿ 86.47 ದೂರ ಎಸೆಯುವ ಮೂಲಕ ಮೊದಲ ಸ್ಥಾನಗಳಿಸಿದರು.

ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಇದುವರೆಗೂ 3 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.

ಈ ಮಧ್ಯೆ 125 ಕೆಜಿ ಫ್ರೀಸ್ಟೈಲ್ ಪುರುಷರ ಕುಸ್ತಿವಿಭಾಗದಲ್ಲಿ ಸುಮಿತ್ ಚಿನ್ನದ ಪದಕ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಮತ್ತೊಂದೆಡೆ ಬಾಕ್ಸಿಂಗ್ ವಿಭಾಗದಲ್ಲಿ ಮನೀಶ್ ಕೌಶಿಕ್ ಮತ್ತು ಅಮಿತ್ ಪಂಗಾಲ್ ಬೆಳ್ಳಿ ಪದಕ ಗಳಿಸಿದ್ದಾರೆ. 62 ಕೆಜಿ ಮಹಿಳೆಯರ ಕುಸ್ತಿವಿಭಾಗದಲ್ಲಿ ಸಾಕ್ಷಿ ಮಲ್ಲಿಕ್ ಕಂಚಿನ ಪದಕ ಗಳಿಸಿದ್ದಾರೆ.

Leave a Comment