ಕಾನೂನು ಬಾಹಿರ 84 ನಿವೇಶನ ಮುಟ್ಟುಗೋಲಿಗೆ ಆಗ್ರಹ

* ದೇವದುರ್ಗ ಎಪಿಎಂಸಿ ವಿಲೀನ ರದ್ದು ಪತ್ರಕ್ಕೆ ಸವಾಲು
ರಾಯಚೂರು.ಜ.11- ದೇವದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕಾನೂನು ಬಾಹೀರವಾಗಿ ಹಂಚಿಕೆ ಮಾಡಿರುವ 84 ನಿವೇಶನಗಳನ್ನು ಶೀಘ್ರವೇ ಡಿನೋಟಿಫಿಕೇಷನ್ ಮಾಡಿ ಅನರ್ಹ ವ್ಯಾಪರಸ್ಥರಿಗೆ ನೀಡಿರುವ ಪರವಾನಿಗೆ ಕಪ್ಪು ಪಟ್ಟಿಗೆ ಸರಕಾರ ವಶಕ್ಕೆ ಪಡೆಯುವಂತೆ ಒತ್ತಾಯಿಸಿದ ಜನ ಶಕ್ತಿ ಒಕ್ಕೂಟ ಸಂಘ ಸಂಚಾಲಕ ಡಾ.ವಿ.ಎ. ಮಾಲಿಪಾಟೀಲ್, ಸಂಸದ ಬಿ.ವಿ. ನಾಯಕ ರವರಿಗೆ ರೈತಪರ ನೈಜ ಕಾಳಜಿ ಇದ್ದಲ್ಲಿ ರಾಯಚೂರು-ದೇವದುರ್ಗ ಎಪಿಎಂಸಿ ವಿಲೀನ ಪ್ರಕ್ರಿಯೆ ರದ್ದು ಮಾಡಲು ಸರಕಾರಕ್ಕೆ ಮರು ಪತ್ರ ಬರೆಯಲಿ ಎಂದು ಸವಾಲೆಸೆದರು.

ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, 2010ನೇ ಸಾಲಿನ ದೇವದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ 36 ಎಕರೆ ಜಮೀನಿನ 112 ನಿವೇಶನ ಪೈಕಿ 84 ನಿವೇಶನಗಳನ್ನು ವ್ಯಾಪಾರಸ್ತರಲ್ಲದ ಪ್ರತಿಷ್ಟಿತರಿಗೆ ಕಾನೂನು ಬಾಹಿರ ಹಂಚಿಕೆ ಮಾಡಿ, ಮೂಲ ವ್ಯಪಾರಸ್ಥರಿಗೆ ಘೋರ ವಂಚನೆ ಮಾಡಲಾಗಿದೆ. ಸಂಸದ ಬಿ.ವಿ. ನಾಯಕ, ಎ. ರಾಜಶೇಖರ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿರವರು ರಾಜಕೀಯ ಪ್ರಭಾವ ಬೀರಿ ಕಾನೂನು ಬಾಹೀರವಾಗಿ ಎರಡೆರಡು ನಿವೇಶನದೊಂದಿಗೆ ಇತರೆ ಪ್ರಭಾವಿತರಿಗೆ ವ್ಯಾಪಾರಸ್ಥರಿಗೆ ಮೀಸಲಿರುವ ನಿವೇಶನ ಹಂಚಿ ಸರಕಾರದ ನಿಯಮಾವಳಿ ಸ್ಪಷ್ಟ ಗಾಳಿಗೆ ದೂರಲಾಗಿದೆ.

ವಂಚಕ ರಾಜಕಾರಣಿಗಳ ಕೂಪದ ಒತ್ತಡಕ್ಕೆ ಮಣಿಯದೇ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳನ್ನು ಡಿನೋಟಿಫಿಕೇಷನ್ ಮಾಡಿ ಅನರ್ಹರಿಗೆ ನೀಡಿರುವ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಿ ಉದ್ದೇಶಿತ ಪ್ಲಾಟ್‌ಗಳನ್ನು ಜಿಲ್ಲಾಡಳಿತ ಸುಪರ್ದಿಗೆ ಪಡೆಯಲು ರಾಜ್ಯ ಸರಕಾರ ಅಗತ್ಯ ಕ್ರಮ ವಹಿಸುವಂತೆ ನಗರಕ್ಕಾಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಿ ತೀವ್ರ ಒತ್ತಡವೇರಲಾಗುವುದು.

ದೇವದುರ್ಗ- ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಲೀನ ಪ್ರಕ್ರಿಯೆಯಲ್ಲಿ ರಾಜಕೀಯ ದುಷ್ಟ ಶಕ್ತಿಗಳ ಕೈವಾಡ ಅಡಗಿದ್ದು, 2 ತಾಲೂಕುಗಳು ಎಪಿಎಂಸಿ ಸಮಿತಿ ಚುನಾವಣಾ ಪ್ರಕ್ರಿಯೆಯಿಂದ ವಂಚಿತವಾಗಲು ಸ್ಥಳೀಯ ಜನಪ್ರತಿನಿಧಿಗಳ ಸ್ವಜನ ಪಕ್ಷಪಾತ, ಕೀಳು ಮಟ್ಟದ ರಾಜಕಾರಣವೇ ನೇರಕಾರಣ. ದೇವದುರ್ಗ ಎಪಿಎಂಸಿ ಪ್ರಾಂಗಣದಲ್ಲಿ 50 ಲಕ್ಷ ವೆಚ್ಚದಡಿ ಆಹಾರ ಧಾನ್ಯ ಶುದ್ಧೀಕರಣ ಘಟಕ ತಲಾ 1 ಕೋಟಿ ವೆಚ್ಛದಡಿ ಮುಚ್ಚು ಹರಾಜು ಕಟ್ಟೆ, 89 ಲಕ್ಷ ವೆಚ್ಚದಡಿ 10 ಸಾವಿರ ಮೆಟ್ರಿಕ್ ಟನ್ ಗೋದಾಮು ನಿರ್ಮಾಣ ಮಾಡಲಾಗಿದೆ. ಬಹು ಕೋಟಿ ಅನುದಾನದಡಿ ಅಭಿವೃದ್ಧಿ ಹೊಂದಿದ ದೇವದುರ್ಗ ಎಪಿಎಂಸಿಯನ್ನು ರಾಯಚೂರು ಎಪಿಎಂಸಿಯೊಂದಿಗೆ ವಿಲೀನಗೊಳಿಸಲು ಸಂಸದರು ರಾಜ್ಯ ಸರಕಾರಕ್ಕೆ ಪತ್ರ ಬರೆದು ತೀವ್ರ ಒತ್ತಡವೇರಿರುವುದು ಖಂಡನೀಯ.

ತಮ್ಮ ಹಿಂಬಾಲಕರನ್ನು ಮಾರುಕಟ್ಟೆ ಅಧ್ಯಕ್ಷ ಹಾಗೂ ನಿರ್ದೇಶಕರನ್ನಾಗಿ ನೇಮಕ ಮಾಡುವ ಹುನ್ನಾರ ಇದಾಗಿದ್ದು, ಲೋಕಸಭಾ ಸದಸ್ಯರಿಗೆ ರೈತಪರ ನೈಜ ಕಾಳಜಿಯಿದ್ದಲ್ಲಿ ಎಪಿಎಂಸಿಗಳನ್ನು ನಿರುದ್ಯೋಗಿ ರಾಜಕಾರಣಿಗಳ ಗಂಜಿ ಕೇಂದ್ರಗಳನ್ನಾಗಿ ಮಾರ್ಪಡಿಸುವ ಪ್ರವೃತ್ತಿ ಕೈಬಿಟ್ಟು ಈಗಾಗಲೇ ಮಾಡಿರುವ ತಪ್ಪನ್ನು ತಿದ್ದಿಕೊಂಡು ವಿಲೀನ ಪ್ರಕ್ರಿಯೆಯಿಂದ ಹೊರಬರಲು ಸರಕಾರಕ್ಕೆ ಮರು ಪತ್ರಬರೆದು ತಮ್ಮ ರೈತಪರ ಬದ್ಧತೆ ಪ್ರದರ್ಶಿಸಲಿ ಎಂದು ಸವಾಲೆಸೆದರು.
ನಕಲಿ ಪರವಾನಿಗೆ ಆಧಾರದಡಿ, ನಿವೇಶನ ಹಂಚಿಕೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ ವಹಿಸಿ, ನಕಲಿ ಲೈಸನ್ಸ್ ದಾರರ ಪರವಾನಿಗೆ ರದ್ದುಗೊಳಿಸುವಂತೆ ಒತ್ತಾಯಿಸಿದರು.

ರೈತ ಸಂಘ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಯಪ್ಪ ಸ್ವಾಮಿ, ವಿಶ್ವನಾಥರೆಡ್ಡಿ, ಜಾನ್‌ವೆಸ್ಲಿ, ಮಾರೆಪ್ಪ ಹರವಿ, ಭೀಮರಾಯ ಜರದಬಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment