ಕಾನೂನು ಅರಿವು-ನೆರವಿನಲ್ಲಿ ಪಾಲ್ಗೊಳ್ಳಲು ನ್ಯಾಯಾಧೀಶರ ಕರೆ

ದಾವಣಗೆರೆ ಸೆ. 13; ಬಡವರು, ಉಚಿತ ಕಾನೂನಿನ ಅಗತ್ಯವಿರುವವರಿಗೆ ಅರಿವು ಮತ್ತು ನ್ಯಾಯ ಒದಗಿಸುವಲ್ಲಿ ಉಚಿತ ಕಾನೂನು ಸಲಹೆಗಾರರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ. ಮುಂದೆಯೂ ಹೀಗೆ ಕಾನೂನು ಸೇವೆ ಮತ್ತು ಅರಿವು ಮೂಡಿಸುವಲ್ಲಿ ಯಶಸ್ಸು ಸಾಧಿಸಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಂ ಶ್ರೀದೇವಿ ಕರೆ ನೀಡಿದರು.
ಬೆಂಗಳೂರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಾವಣಗೆರೆ ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹೈಸ್ಕೂಲ್ ಮೈದಾನ ಬಳಿಯ ಹಳೆ ಕೋರ್ಟ್ ಸಂಕೀರ್ಣದ ಎಡಿಆರ್ ಕಟ್ಟಡದಲ್ಲಿ ಉಚಿತ ಕಾನೂನು ಸಲಹೆಗಾರರಿಗೆ ಏರ್ಪಡಿಸಲಾಗಿದ್ದ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಸಾಲಿನಲ್ಲಿಯೂ ಉಚಿತ ಕಾನೂನು ಸಲಹೆಗಾರರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇದರಿಂದ ಅವರು ಉತ್ಸಾಹದಿಂದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಮತ್ತು ಲೋಕ್ ಅದಾಲತ್‍ನಲ್ಲಿ ಪಾಲ್ಗೊಂಡು ಉತ್ತಮ ಕಾರ್ಯ ನಿರ್ವಹಿಸಿದ್ದರು. 2013 ರ ನಂತರ ದಂಡ ಪ್ರಕ್ರಿಯೆ ಅಧಿನಿಯಮದಡಿ ಸಾಕಷ್ಟು ತಿದ್ದುಪಡಿ, ಬದಲಾವಣೆಗಳು ಆಗಿವೆ. ಅವುಗಳ ಬಗ್ಗೆ ವಕೀಲರು ತಿಳಿದುಕೊಂಡು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಣ್ಣಪುಟ್ಟ ತಪ್ಪುಗಳ ಕುರಿತು ಅರಿವು ಮೂಡಿಸಿದಲ್ಲಿ ಇದು ದೊಡ್ಡ ಪ್ರಮಾಣದ ಅವಘಡಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು. ಮೋಟಾರು ವಾಹನಗಳ ಪ್ರಕರಣದಲ್ಲಿ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಹರಿಹರದಲ್ಲಿ ಹೆಚ್ಚು ಅಂದರೆ 500 ಪ್ರಕರಣಗಳು ದಾಖಲಾಗಿದ್ದು, ಎಲ್ಲಿ ಮೋಟಾರು ಮತ್ತು ಕ್ರಿಮಿನಲ್ ಪ್ರಕರಣಗಳು ಹೆಚ್ಚಿರುತ್ತವೋ ಅಂತಹ ಕಡೆ ಕಾನೂನಿನ ಹೆಚ್ಚೆಚ್ಚು ಉಲ್ಲಂಘನೆಯಾಗುತ್ತಿದೆ ಎಂದು ಅರ್ಥ. ಆದ್ದರಿಂದ ಈ ಕುರಿತು ಅಂತಹ ಪ್ರದೇಶದಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಹಾಗೂ ಸಲಹೆಗಾರರು ಸಾಮಾಜಿಕ ಪಿಡುಗುಗಳಾದಂತಹ ದೇವದಾಸಿ, ಬಾಲ್ಯವಿವಾಹದಂತಹ ಪದ್ದತಿಗಳ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ ಎಸ್ ಸದಲಗಿ ಮಾತನಾಡಿ, ನಮ್ಮ ನಿತ್ಯದ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡುವ ಇಂತಹ ಕಾರ್ಯಾಗಾರಗಳು ಅತ್ಯಂತ ಉಪಯುಕ್ತವಾಗಿದ್ದು, ಕಾನೂನು ಉಚಿತ ಸಲಹೆಗಾರರು ಕಾನೂನಿನಲ್ಲಿನ ಕಾಯ್ದೆಗಳು, ತಿದ್ದುಪಡಿಗಳು, ಹೊಸ ಬದಲಾವಣೆಗಳ ಬಗ್ಗೆ ತಾವು ತಿಳಿದು ಇತರರಿಗೂ ತಿಳಿಸಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಕಾನೂನು ಒಂದು ಸಾಗರವಿದ್ದಂತೆ ಅದರಲ್ಲಿ ನಾವೊಂದು ಹನಿಯಷ್ಟು ತಿಳಿದಿದ್ದೇವೆ ಅಷ್ಟೇ. ನ್ಯಾಯಾಧೀಶರು, ವಕೀಲರು ನಿರಂತರ ಕಲಿಕೆ, ಅಧ್ಯಯನದಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಹೊಸ ಹೊಸ ಕಾನೂನುಗಳು ಬರುತ್ತಾ ಇರುತ್ತವೆ. ಇತ್ತೀಚೆಗೆ ಕೌಟುಂಬಿಕ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳನ್ನು ಶೀಘ್ರವಾಗಿ ಹೇಗೆ ಇತ್ಯರ್ಥಪಡಿಸಬಹುದೆಂದು ಈ ಕಾರ್ಯಾಗಾರದ ಮೂಲಕ ತಿಳಿಯುತ್ತದೆ. ತರಬೇತಿ ಹೊಂದಿದ ಕಾನೂನು ಸಲಹೆಗಾರರು ನೊಂದವರ ನೆರವಿಗೆ ಧಾವಿಸಬೇಕೆಂದು ಕರೆ ನೀಡಿದರು. ಕೌಟುಂಬಿಕ ನ್ಯಾಯಾಯಲದ ಜಿಲ್ಲಾ ನ್ಯಾಯಾಧೀಶರಾದ ಬಿ ಎಲ್ ಜಿನರಲ್ಕರ್ ಮಾತನಾಡಿ, ತರಬೇತಿ ಎಲ್ಲರಿಗೂ ಅತ್ಯವಶ್ಯ. ಎಷ್ಟೇ ಕಲಿತರೂ ತರಬೇತಿಯ ಅಗತ್ಯವಿದೆ. ಲೋಹವನ್ನು ಹೇಗೆ ಉಜ್ಜಿ ಪಾಲಿಷ್ ಮಾಡಿದಾಗ ಹೊಳಪು ಪಡೆಯುತ್ತದೆಯೋ ಹಾಗೆ ತರಬೇತಿಯಿಂದ ಹೊಸ ಹೊಸ ವಿಷಯಗಳನ್ನು ತಿಳಿಯುವ ಮೂಲಕ ನಾವು ಪಾಲಿಷ್ ಆಗುತೇವೆ.
ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಸಾಮಾನ್ಯವಾಗಿ ನ್ಯಾಯಾಧೀಶರು ಸಾರ್ವಜನಿಕ ರಂಗದಲ್ಲಿ ಬೆರೆಯುವುದು ಕಡಿಮೆ. ಆದರೆ ಉಚಿತ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ಜನರೊಂದಿಗೆ ಬೆರೆಯುತ್ತಾ, ಅವರ ಅಹವಾಲುಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುತ್ತಾ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತೆ, ರೈತಪರ ಮತ್ತು ರಾಜೀ ಸಂಧಾನದ ಮೂಲಕ ಪರಿಹಾರ ಒದಗಿಸುತ್ತಿದ್ದಾರೆ. ಎಂದು ಪ್ರಶಂಸಿಸಿದ ಅವರು ಪ್ರಕರಣದ ಎರಡೂ ಪಾರ್ಟಿಗಳ ಮನವೊಲಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸುವಲ್ಲಿ ನ್ಯಾಯಾಧೀಶರು ಮುಂದೆಯೂ ಹೀಗೆ ಶ್ರಮಿಸಬೇಕು ಹಾಗೂ ಉಚಿತ ಕಾನೂನು ಸಲಹೆಗಾರರು ಬಡವರು, ಅಗತ್ಯವಿದ್ದವರಿಗೆ ನೆರವನ್ನು ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಹಿರಿಯ ವಕೀಲರಾದ ಜಿ ರಮಾದೇವಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಉಚಿತ ಕಾನೂನು ಸಲಹೆಗಾರರು, ವಕೀಲರು ಹಾಜರಿದ್ದರು.

Leave a Comment