ಕಾಣೆಯಾಗಿದ್ದ ವಿದ್ಯಾರ್ಥಿನಿ ತೆಲಂಗಾಣದಲ್ಲಿ ಶವವಾಗಿ ಪತ್ತೆ

ಕಲಬುರಗಿ, ಸೆ. ೧೧- ಇಲ್ಲಿನ ಕುವೆಂಪು ನಗರದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶವ ತೆಲಂಗಾಣ ರಾಜ್ಯದ ಪರಗಿ ಹೊರವಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರ ಕೊಲೆ ಮಾಡಿ ಸಾಕ್ಷಿನಾಶ ಮಾಡುವ ಸಂಬಂಧ ಶವ ಸಟ್ಟು ಹಾಕಿದ್ದಾನೆ ಎಂದು ವಿದ್ಯಾರ್ಥಿನಿಯ ಪಾಲಕರು ಆರೋಪಿಸಿದ್ದಾರೆ.
ಕುವೆಂಪು ನಗರದ ಶಿಬಾ (22) ಎನ್ನುವ ಫೈನ್ ಆರ್ಟ್ಸ್ ವಿದ್ಯಾರ್ಥಿನಿ ರಾಜಾಪುರ ರಸ್ತೆಯಲ್ಲಿರುವ ಮಹರ್ಷಿ ವಿದ್ಯಾಮಂದಿರ ಬಳಿಯ ನಿವಾಸಿ ರವಿ ಪೂಜಾರ ಎನ್ನುವವನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಸೆ.3 ರಂದು ಮನೆಯಿಂದ ಹೋದ ವಿದ್ಯಾರ್ಥಿನಿ ವಾಪಸ್ಸು ಬಾರದ ಕಾರಣ ಯುವತಿಯ ಪಾಲಕರು ನಗರದ ಎಲ್ಲ ಕಡೆ ಹುಡುಕಾಡಿ ಸೆ.6 ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ರವಿ ಪೂಜಾರ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ರವಿ ಪೂಜಾರ ಹಾಗೂ ಶಿಬಾ ಪ್ರೀತಿಸುತ್ತಿದ್ದರೆಂದು ಅವರ ಮಧ್ಯೆ ದೈಹಿಕ ಸಂಬಂಧ ಇತ್ತೆಂದು, ಶಿಬಾ ಗರ್ಭಿಣಿಯಾಗಿದ್ದರಿಂದಾಗಿ ಗರ್ಭಪಾತ ಮಾಡಿಸಲು ಅವಳನ್ನು ತೆಲಂಗಾಣದ ಪರಗಿಗೆ ಆತ ಕರೆದುಕೊಂಡು ಹೋಗಿದ್ದ. ಈ ವೇಳೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪರಗಿಯ ಹೊರವಲಯದಲ್ಲಿ ಆಕೆಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪರಗಿ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷಿನಾಶ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಬ್ರಹ್ಮಪುರ ಠಾಣೆಯಲ್ಲಿ ವಿದ್ಯಾರ್ಥಿನಿ ಕಣ್ಮರೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬ್ರಹ್ಮಪುರ ಠಾಣೆ ಪೊಲೀಸ್ ಅಧಿಕಾರಿಗಳು ಪರಗಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಪರಗಿ ಠಾಣೆಯಿಂದ ಪ್ರಕರಣ ವರ್ಗಾಯಿಸಿದ ನಂತರ ಇಲ್ಲಿನ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ ತಿಳಿಸಿದ್ದಾರೆ.
ಆರೋಪಿ ವಶಕ್ಕೆ
ವಿದ್ಯಾರ್ಥಿನಿ ಶಿಬಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರವಿ ಪೂಜಾರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment