ಕಾಡು ಪ್ರಾಣಿಗಳ ಕಾಟ ತಪ್ಪಿಸಿ ರೈತರ ಬೆಳೆ ರಕ್ಷಿಸಿ

ಬೆಂಗಳೂರು, ನ. ೬- ಮಲೆನಾಡು ಭಾಗದಲ್ಲಿ ರೈತರ ಬೆಳೆಗಳಿಗೆ ಹಾನಿ ಮಾಡುತ್ತಿರುವ ಕಾಡುಕೋಣ, ಹಂದಿ, ಮಂಗಗಳ ಹಾವಳಿ ತಪ್ಪಿಸಲು ಸೋಲಾರ್ ತಂತಿ ಬೇಲಿ ಅಳವಡಿಸಬೇಕು ಎಂದು ಬಿಜೆಪಿ ಶಾಸಕ ಅರಗಜ್ಞಾನೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಮಂಗಗಳ ಹಾವಳಿ ತಪ್ಪಿಸಲು ಹೊಸನಗರ ತಾಲ್ಲೂಕಿನ ನಾಗೋಡಿಯಲ್ಲಿ 100 ಎಕರೆ ಪ್ರದೇಶದಲ್ಲಿ ಮಂಗಗಳಿಗಾಗಿ ಪ್ರತ್ಯೇಕ ಮಂಕಿ ಪಾರ್ಕ್ ನಿರ್ಮಿಸಲು ಸರ್ಕಾರ ಒಪ್ಪಿರುವುದು ಸ್ವಾಗತಾರ್ಹ. ಆದಷ್ಟು ಬೇಗ ಈ ಯೋಜನೆ ಕಾರ್ಯರೂಪಕ್ಕೆ ಬರುವಂತಾಗಬೇಕು ಎಂದು ಅವರು ಹೇಳಿದರು.
ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಡು ಕೋಣಗಳು ಮತ್ತು ಹಂದಿಗಳಿಂದ ಬೆಳೆಗಳಿಗೆ ಭಾರಿ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ಏನೆಲ್ಲಾ ಪ್ರಯತ್ನಪಟ್ಟರೂ ಫಲಕಾರಿಯಾಗಿಲ್ಲ. ಬೆಳೆಗಳ ಸುತ್ತಮುತ್ತ ಸೋಲಾರ್ ತಂತಿಬೇಲಿ ಅಳವಡಿಸಿದರೆ ಹಾವಳಿ ತಪ್ಪಬಹುದು ಎಂದು ಹೇಳಿದರು.
ಮಂಗಗಳ ಹಾವಳಿಯಿಂದ ಅಡಕೆ, ಏಲಕ್ಕಿ, ತರಕಾರಿ ಬೆಳೆಗಳು ಎಲ್ಲವೂ ನಾಶವಾಗುತ್ತಿವೆ. ಇದರಿಂದ ಮುಕ್ತಿ ಪಡೆಯಲು ಪ್ರತ್ಯೇಕ ಮಂಕಿ ಪಾರ್ಕ್ ಆದಷ್ಟು ಬೇಗ ತಲೆ ಎತ್ತಬೇಕು. ಈಗಾಗಲೇ ಅಸ್ಸಾಂ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಇಂತಹ ಪಾರ್ಕ್ ನಿರ್ಮಾಣವಾಗಿದೆ. ರಾಜ್ಯದಲ್ಲೂ ಮಂಕಿಪಾರ್ಕನ್ನು ಪ್ರಾಯೋಗಿಕ ನಿರ್ಮಿಸಿ ಹಾವಳಿ ತಪ್ಪಲಿದೆಯೇ ಇಲ್ಲವೇ ಎಂಬುದನ್ನು ಅಧ್ಯಯನ ನಡೆಸಬೇಕು ಎಂದರು.
ಮಂಕಿ ಪಾರ್ಕ್ ನಿರ್ಮಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿ ದಾಖಲಾಗುವಂತಹ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು. ನಿನ್ನೆ ನಡೆದ ಸಚಿವರುಗಳು, ಅಧಿಕಾರಿಗಳ ಸಭೆಯಲ್ಲಿ ಅರಣ್ಯಾಧಿಕಾರಿಗಳಿಗೆ ಮಂಕಿಪಾರ್ಕ್ ನಿರ್ಮಿಸುವಂತೆ ಸೂಚನೆ ನೀಡಿದ್ದಾರೆ. ಅವರಿಗೆ ರೈತರ ಪರವಾಗಿ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದರು.
ನಾಗೋಡಿಯಲ್ಲಿ ಕಂದಾಯ ಜಮೀನು 100 ಎಕರೆಗೂ ಹೆಚ್ಚಿನ ಪ್ರಮಾಣದಲ್ಲಿವೆ. ಈ ಜಮೀನನ್ನು ಜಿಲ್ಲಾಧಿಕಾರಿಯವರು ಕೂಡಲೇ ಸ್ವಾದೀನಪಡಿಸಿಕೊಂಡು ಮಂಕಿಪಾರ್ಕ್ ನಿರ್ಮಾಣಕ್ಕೆ ಸಹಕರಿಸಬೇಕು. ಅರಣ್ಯಾಧಿಕಾರಿಗಳು ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

Leave a Comment