ಕಾಡುಕೋಣ ದಾಳಿ: ಕೃಷಿಕ ಮೃತ್ಯು

ಅಮಾಸೆಬೈಲು, ಸೆ.೧೧- ಕಾಡು ಕೋಣವೊಂದು ಕೊಂಬಿನಿಂದ ಎದೆ ತಿವಿದ ಪರಿಣಾಮ ಕೃಷಿಕರೊಬ್ಬರು ಮೃತಪಟ್ಟ ಘಟನೆ ಸೆ.೯ರಂದು ರಾತ್ರಿ ರಟ್ಟಾಡಿ ಗ್ರಾಮದ ನಡಂಬೂರು ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಗೋಪಾಲ ಪೂಜಾರಿ(೬೮) ಎಂದು ಗುರುತಿಸ ಲಾಗಿದೆ. ಇವರು ಮನೆ ಸಮೀಪದ ಭತ್ತದ ಕೃಷಿ ಗದ್ದೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ಹಳ್ಳಿಮನೆಯನ್ನು ನಿರ್ಮಿಸಿ ಕಾಯಲು ಹೋಗುತ್ತಿದ್ದರು. ಅದರಂತೆ ಇವರು ನಿನ್ನೆ ರಾತ್ರಿ ನೆರೆಮನೆಯ ರಘು ಶೆಟ್ಟಿ, ವಾಸು ನಾಯ್ಕ ಎಂಬವರ ಜೊತೆ ಭತ್ತದ ಗದ್ದೆ ಕಾಯಲು ಹೋಗಿದ್ದರೆನ್ನಲಾಗಿದೆ. ಆ ವೇಳೆ ಕಾಡುಕೋಣ ಬಂದು ಬೆಳೆ ನಾಶ ಮಾಡುವುದನ್ನು ಕಂಡ ಅವರು, ಕಾಡು ಕೋಣವನ್ನು ಓಡಿಸಲು ಹೋದರು. ಆಗ ಕಾಡು ಕೋಣ ಗೋಪಾಲ ಪೂಜಾರಿಯ ಎದೆಯ ಭಾಗಕ್ಕೆ ಕೊಂಬಿನಿಂದ ತಿವಿಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment