‘ಕಾಡಿ’ನಿಂದ ‘ಲಿಫ್ಟ್‌’ವರೆಗೂ…. 43 ವರ್ಷಗಳ ಸಿನಿ ಜರ್ನಿಯಲ್ಲಿ 200 ನಾಟೌಟ್….

ಸುಂದರ ರಾಜ್, ಕನ್ನಡ ಚಿತ್ರರಂಗ ಕಂ‌ಡ ಪ್ರತಿಭಾವಂತ ಕಲಾವಿದ ಯಾವುದೇ ಪಾತ್ರ ನೀಡಿದರೂ ಲೀಲಾಜಾಲವಾಗಿ ನಟಿಸಬಲ್ಲ ಚಾಕಚಕ್ಯತೆ ಇರುವ ಕಲಾವಿದ. ಕಪ್ಪು, ಬಿಳುವು, ಈಸ್ಟ್ರನ್ ಕಲರ್‌ನಿಂದ ಈಗಿನ ಸಿನಿಮಾ ಸ್ಕೋಪ್‌ವರೆಗೂ ಸಿನಿ ಜರ್ನಿಯನ್ನು ಮುಂದುವರೆಸಿಕೊಂಡು ಬಂದವರು…

‘ನಿರ್ದೇಶಕನಾಗಬೇಕೆಂಬ ಕನಸಿನೊಂದಿಗೆ ಚಿತ್ರರಂಗಕ್ಕೆ ಬಂದ ಸುಂದರ ರಾಜ್ ನಟನಾಗಿ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ, ಇದೀಗ ಚಿತ್ರಗಳ ಸಂಖ್ಯೆಯನ್ನು ದ್ವಿಶತಕಕ್ಕೆ ಏರಿಸಿಕೊಂಡಿದ್ದಾರೆ. ಕಾಡಿನಿಂದ ಲಿಫ್ಟ್‌ಮ್ಯಾನ್‌ವರೆಗೂ ನಡೆದುಬಂದ ಸಿನಿ ಜರ್ನಿ. ರೋಚಕ ಮತ್ತು ಕುತೂಹಲಕಾರಿ’.

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಕಾ‌ಡು’ ಚಿತ್ರದಿಂದ ಆರಂಭವಾದ ಚಿತ್ರ ಜೀವನ ಕಾರಂಜಿ ಶ್ರೀಧರ್ ನಿರ್ದೇಶನ ಲಿಫ್ಟ್‌ಮ್ಯಾನ್ ಅವರಿಗೂ ಸಾಗಿ ಬಂದಿದೆ. ಲಿಫ್ಟ್‌ಮ್ಯಾನ್ ಅವರ 200ನೇ ಚಿತ್ರ.

1973 ರಲ್ಲಿ ‘ಕಾಡು’ ಚಿತ್ರ. ಸುಂದರ ರಾಜು ಚಿತ್ರ ಜೀವನ ಭದ್ರ ಬುನಾದಿ ಹಾಕಿಕೊಟ್ಟಿತು. ನಿರ್ದೇಶಕನಾಗಬೇಕೆಂಬ ಆಸೆ ಮತ್ತು ಕನಸು ಹೊತ್ತು ಸುಂದರರಾಜ್ 43 ವರ್ಷಗಳ ಕಾಲ ವಿಭಿನ್ನ ಚಿತ್ರಗಳು ಮತ್ತು ಪಾತ್ರಗಳ ಮೂಲಕ ಜನರನ್ನು ಮನರಂಜಿಸಿದ್ದಾರೆ.

ಚಿತ್ರಗಳ ಸಂಖ್ಯೆಯನ್ನು ‘ದ್ವಿಶತಕ’ಕ್ಕೆ ಏರಿಸಿಕೊಂಡ ಸಂದರ್ಭದಲ್ಲಿ ಚಿತ್ರ ಜೀವನದ ಬಗ್ಗೆ ವಿವರ ನೀಡಿದರು ಸುಂದರ ರಾಜ್.

ಚಿತ್ರರಂಗಕ್ಕೆ ಬಂದ ಆರಂಭದ ದಿನಕ್ಕೂ ಈಗಿನ ಕಾಲಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ತಂತ್ರಜ್ಞಾನ ಬದಲಾಗಿದೆ. ಬ್ಲಾಕ್ ಅಂಡ್ ವೈಟ್‌ನಿಂದ ಸಿನಿಮಾ ಸ್ಕೋಪ್‌ವರೆಗೂ ಬಂದಿದೆ. ಹೊಸ ಪೀಳಿಗೆ, ಕಥಾ ವಸ್ತು ವಿಭಿನ್ನ ಮೇಕಿಂಗ್, ಯುವ ಜನರ ಎನರ್ಜಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ, ಎನರ್ಜಿ ಹೀಗೆ ಬದಲಾವಣೆಯತ್ತ ಸಾಗಿದೆ.

ನಿರ್ದೇಶಕರ ಮುಂದೆ ಮಾತನಾಡಲು ನಾವು ಹೆದರುತ್ತಿದ್ದೆವು. ಈಗಿನ ನಟರಿಗೆ ಯಾವುದರಲ್ಲಿಯೂ ಅಂಜಿಕೆ ಇಲ್ಲ. ಪ್ರತಿಯೊಂದನ್ನೂ ಪ್ರಶ್ನೆ ಮಾಡ್ತಾರೆ. ನಾವು ತುಂಟರಾಗಿದ್ದರೂ ಈಗಿನ ನಟರಷ್ಟು ಬೋಲ್ಡ್ ಆಗಿರಲಿಲ್ಲ. ಚಿತ್ರರಂಗದಲ್ಲಿ ಮೊದಲು ಸಂಭಾವನೆ ಪ‌ಡೆದಿದ್ದುದು 300 ರೂ. ಈಗ ಕೋಟಿಗಳದ್ದೇ ಮಾತು…. ತಂತ್ರಜ್ಞಾನ ಬೆಳೆದಿದೆ ಆದರೆ ಕಥಾವಸ್ತು ಇನ್ನಷ್ಟು ಗಟ್ಟಿಯಾಗಬೇಕಾಗಿವೆ.

ಚಿತ್ರ ಜೀವನದಲ್ಲಿ ಸಾಕಷ್ಟು ಏರು-ಪೇರು, ನೋವು-ದುಃಖ ಅನುಭವಿಸಿದ್ದೇನೆ. ಕೈಗೆ ಬಂದ ಅವಕಾಶ ಕೈತಪ್ಪಿ ಹೋದ ಅನೇಕ ಉದಾಹರಣೆಗಳು ಕಣ್ಣ ಮುಂದೆ ಇವೆ. ಆದರೂ ಎದೆಗುಂದಿಲ್ಲ. ಚಿತ್ರಗಳು ಇಲ್ಲದಿದ್ದಾಗ ಕೈಕಟ್ಟಿ ಸುಮ್ಮನೆ ಕುಳಿತಿಲ್ಲ. ಉತ್ತರ ಕರ್ನಾಟಕಕ್ಕೆ ಹೋಗಿ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಸುಖದ ಸುಪ್ಪತ್ತಿಗೆ ಅಂತೇನು ಇಲ್ಲ. ಆದರೆ ಇರುವುದರಲ್ಲಿ ನೆಮ್ಮದಿ ಕಂಡಿದ್ದೇನೆ.

ರೈತರಿಗೂ, ಕಲಾವಿದರಿಗೂ ಯಾವುದೇ ವ್ಯತ್ಯಾಸವಿಲ್ಲ. ರೈತ ಮಳೆ ಬಂದಾಗ ಬೆಳೆ ಬೆಳೆಯುತ್ತಾನೆ. ಆದರೆ ಕಲಾವಿದ ಅವಕಾಶ ಸಿಕ್ಕಾಗ ನಟಿಸಬೇಕು ಅಷ್ಟೆ…

200ನೇ ಚಿತ್ರ ‘ಲಿಫ್ಟ್‌ಮ್ಯಾನ್’ ವಿಭಿನ್ನವಾದುದು. 20 ವರ್ಷಗಳ ಕಾಲ ವಿಧಾನಸೌಧದಲ್ಲಿ ‘ಲಿಫ್ಟ್‌ಮ್ಯಾನ್’ ಆಗಿ ನಿವೃತ್ತಿಯಾದ ವ್ಯಕ್ತಿಯ ಕಥೆಗೆ ಸಿನಿಮಾಟಿಕ್‌ ಆಗಿ ಚಿತ್ರೀಕರಣ ಮಾಡಲಾಗಿದೆ. 20 ವರ್ಷದಲ್ಲಿ 11 ಮುಖ್ಯಮಂತ್ರಿಗಳು, ವುಡಾರಿಗಳು, ಶಾಸಕರು, ಸಚಿವರಾದುದ್ದನ್ನೂ ಕಣ್ಣ ಮುಂದೆ ಕಂಡ ಲಿಫ್ಟ್‌ಮ್ಯಾನ್. ಆತನ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇಂತಹದೊಂದು ಕಥೆಯನ್ನಿಟ್ಟುಕೊಂಡು ಸಿನಿಮಾಕ್ಕೆ ಬೇಕಾದ ಅಂಶಗಳನ್ನು ಸಾರಿಸಲಾಗಿದೆ. ‘ಲಿಫ್ಟ್‌ಮ್ಯಾನ್’ ಪಾತ್ರ ವಿಭಿನ್ನವಾಗಿದೆ. ಹಿರಿಯ ನಿರ್ದೇಶಕ ದ್ವಾರಕೀಶ್ ಬಿಡುಗಡೆಗೆ ಬಂದು ಶುಭ ಕೋರಿದ್ದಾರೆ. ಜೊತೆಗೆ ಗಿರೀಶ್ ಕಾರ್ನಾಡ್ ಆಶೀರ್ವಾದ ಮಾಡಿದ್ದಾರೆ.

ಒಳ್ಳೆಯ ಚಿತ್ರವಾಗುವುದರಲ್ಲಿ ಸಂದೇಹವಿಲ್ಲ, ರಾಮಾನಾಯಕ್ ನಿರ್ಮಾಣ ಮಾಡಿದ್ದು, ಸುರೇಶ್ ಹೆಬ್ಳೀಕರ್, ಸುನೀಲ್ ಪುರಾಣಿಕ್, ಅರುಣಾ ಬಾಲರಾಜ್, ನಿಹಾರಿಕಾ, ಶೀತಲ್ ಶೆಟ್ಟಿ ಮತ್ತಿತರ ತಾರಾಬಳಗವಿದೆ ಎನ್ನುತ್ತಾರೆ ಸುಂದರ ರಾಜ್.

Leave a Comment