ಕಾಡಿನಲ್ಲಿ ಮಕ್ಕಳ ರೋಚಕತೆ

-ಚಿಕ್ಕನೆಟಕುಂಟೆ. ಜಿ ರಮೇಶ್
ಇತ್ತೀಚೆಗೆ ಬರುತ್ತಿರುವ ಮಕ್ಕಳ ಚಿತ್ರಗಳು ಜನರ ಮನಮುಟ್ಟುವುದು ತೀರಾ ಕಡಿಮೆ. ಹೀಗಾಗಿ ಮಕ್ಕಳು ಸೇರಿದಂತೆ ಎಲ್ಲರಿಗೂ ಇಷ್ಟವಾಗುವ ಸಿನಿಮಾ ಮಾಡುವ ಉದ್ದೇಶದಿಂದ ಉದ್ದೇಶದಿಂದ “ಪುಟಾಣಿ ಸಫಾರಿ” ಚಿತ್ರವನ್ನು ಹೊಸ ತಂಡವೊಂದು ಸದ್ದುಗದ್ದಲವಿಲ್ಲದೆ ಮಾಡಿ ಮುಗಿಸಿದೆ.

ಚಿತ್ರಕ್ಕೆ ಚಂದ್ರಶೇಖರ್ ಬಂಡವಾಳ ಹಾಕಿದ್ದು ಅವರಿಗೆ, ಎಂ.ಕೆ ಜಗದೀಶ್ ಮತ್ತು ಮಂಜುನಾಥ್ ಕೈಜೋಡಿಸಿದ್ದಾರೆ. ಚಿತ್ರಕ್ಕೆ ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮನೀಶ್, ಕೈಲಾಶ್, ಸಹನ,ವಿಜಯ್, ರಾಕಿ ಮತ್ತಿತರಿದ್ದಾರೆ.

ಚಿತ್ರಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮರಂಭ ಕಳೆದವಾರ ಆಯೋಜಿಸಲಾಗಿತ್ತು. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಸೇರಿದಂತೆ ಹಲವು ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ರವೀಂದ್ರ ವಂಶಿ, ಮಕ್ಕಳ ಚಿತ್ರಗಳು ಬರುತ್ತಿವೆ. ಆದರೆ ಮಕ್ಕಳ ವಯಸ್ಸಿಗೆ ಇಳಿದು ಸಿನಿಮಾ ಮಾಡುವರ ಸಂಖ್ಯೆ ಕಡಿಮೆ ಇದನ್ನು ಗಮನದಲ್ಲಿರಿಸಿಕೊಂಡು ಚಿತ್ರ ಮಾಡಲಾಗಿದೆ. ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ಶ್ರೀಮಂತ ಮತ್ತು ಬಡತನದ ಬೇಗೆಯಲ್ಲಿ ಬೆಳೆದ ಇಬ್ಬರು ಮಕ್ಕಳು ಅನಿವಾರ್ಯವಾಗಿ ಕಾಡಿನಲ್ಲಿ ತಪ್ಪಿಸಿಕೊಂಡಾಗ ಆ ಮಕ್ಕಳು ಎದುರಿಸುವ ಕಷ್ಟ, ಅದರಿಂದ ಅವರು ಹೊರ ಬರುತ್ತಾರಾ ಇಲ್ಲವೇ ಎನ್ನುವುದು ಚಿತ್ರದ ತಿರುಳು. ಸದ್ಯದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ನಿರ್ಮಾಪಕ ಚಂದ್ರಶೇಖರ್, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಶಿರಸಿ ಮತ್ತು ಸಿದ್ದಾಪುರ ಸೇರಿದಂತೆ ಆ ಭಾಗದ ದಟ್ಟ ಕಾಡಿನಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಮಕ್ಕಳ ಚಿತ್ರವಾದರೂ ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಚಿತ್ರಕ್ಕೆ ೭೦ ಲಕ್ಷ ರೂಫಾಯಿ ಖರ್ಚು ಮಾಡಲಾಗಿದೆ. ಕಾಡಿನಲ್ಲಿ ೨೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಜೊತೆಗೆ ಹೆಚ್ಚು ಗ್ರಾಫಿಕ್ ಕೂಡ ಬಳಸಲಾಗಿದೆ. ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ಸುಲಭ ಆದರೆ ನಿರ್ಮಾಪಕರನ್ನು ಭೇಟೆಯಾಡುವುದು ಕಷ್ಟ. ಮಕ್ಕಳ ಚಿತ್ರವಾದರೂ ನಿರ್ಮಾಪಕರು ಹೆಚ್ಚು ಖರ್ಚು ಮಾಡಿದ್ದಾರೆ ಒಳ್ಳೆಯದಾಗಲಿ ಎಂದು ಶುಭಕೋರಿದರು.ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳಿಗೆ ಹೆಚ್ಚು ಒತ್ತು ನೀಡಬೇಕು .

ರಾಜ್ಯದ ನೆಲೆ ಜಲ ಸೇರಿದಂತೆ ಇಲ್ಲಿಯ ಸೌಲಭ್ಯ ಬಳಸಿಕೊಳ್ಳುತ್ತಿದ್ದು ಅದಕ್ಕೆ ಗೌರವ ನೀಡಿ ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಚಿತ್ರದ ಸಹ ನಿರ್ಮಾಪಕರಾದ ಜಗದೀಶ್ ಮತ್ತು ಮಂಜುನಾಥ್, ಒಳ್ಳೆಯ ಚಿತ್ರ ಮಾಡುವ ಉದ್ದೇಶದಿಂದ ಚಿತ್ರಕ್ಕೆ ಬಂಡವಾಳ ಹಾಕಿದ್ದೇವೆ. ಚಿತ್ರದ ಬಹುತೇಕ ಖರ್ಚುವೆಚ್ಚಗಳು ನಿರ್ಮಾಪಕರಾದ ಚಂದ್ರಶೇಖರ್ ಅವರದೇ, ನಾವು ಅವರೊಂದಿಗೆ ಕೈ ಜೋಡಿಸಿದ್ದೇವೆ ಎಂದು ಹೇಳಿಕೊಂಡರು.

Leave a Comment