ಕಾಂಗ್ರೆಸ್ ಹೋಗುವ ಸಮಯ ಸಮೀಪಿಸುತ್ತಿದೆ

ದಾವಣಗೆರೆ, ಸೆ. 13 – ರಾಜ್ಯ ಸರ್ಕಾರ ರೈತ ಪರ ಚಿಂತನೆ ಮಾಡುತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷ ರೈತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ್ ಗೌಡ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಸಮುದಾಯ ಭವನದಲ್ಲಿಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ರೈತ ಮೋರ್ಚಾದ ವತಿಯಿಂದ ಆಯೋಜಿಸಿದ್ದ ರೈತ ಪ್ರಹಾರಿ ಕಾರ್ಯಾಗಾರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಮಾತ್ರ ರೈತರ ಬಗ್ಗೆ ಕಾಳಜಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ರೈತರ ಪರ ಯೋಜನೆಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ಸೋಗಲಾಡಿತನದಿಂದ ಕೇಂದ್ರ ನೀಡಿರುವ ಯೋಜನೆಗಳನ್ನೇ ತನ್ನದೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಧರ್ಮದ ಗುರುಗಳನ್ನು ಹಾಗೂ ಧರ್ಮವನ್ನು ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಜಾತಿ ಜಾತಿಗಳ ನಡುವೆ ಜಗಳ ತಂದಿಡುತ್ತಿದೆ. ಅದಕ್ಕೂ ಮೀರಿ ಭ್ರಷ್ಟಾಚಾರದ ರಾಜಕಾರಣ ಮಾಡುತ್ತಿದೆ. ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ರೈತರ ಪರ ಚಿಂತನೆ ನಡೆಸಬೇಕು. ಕಾಂಗ್ರೆಸ್ ಹೋಗುವ ಸಮಯ ಸಮೀಪಿಸುತ್ತಿದೆ ಆದ್ದರಿಂದ ಈಗಲಾದರು ರೈತರು ಹಾಗೂ ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು. ಕೇಂದ್ರ ಸರ್ಕಾರ ರೈತರ ಮಕ್ಕಳಿಗೆ ಪಿಂಚಣಿ ಯೋಜನೆ, ಉದ್ಯೋಗಕ್ಕೆ ಆರ್ಥಿಕ ಸಹಾಯದಂತಹ ಹಲವಾರು ಯಶಸ್ವಿ ಯೋಜನೆಗಳನ್ನು ನೀಡಿದ್ದಾರೆ. ಈ ನಿಲುವು ಬಿಜೆಪಿಯರಿಂದ ಮಾತ್ರ ಸಾಧ್ಯ.ಇದನ್ನು ಕಾಂಗ್ರೆಸ್ ನವರು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಬಸವರಾಜ ನಾಯ್ಕ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಹೆಚ್.ಎನ್.ಶಿವಕುಮಾರ್, ರಮೇಶ್ ನಾಯ್ಕ್, ಆನಂದಪ್ಪ, ಶಾಂತರಾಜ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment