ಕಾಂಗ್ರೆಸ್ ಸಮಾವೇಶಕ್ಕೆ ಹರಿದು ಬಂದ ಜನಸಾಗರ

ಯುವಕರಿಂದ ಸಾವಿರಾರು ಸಂಖ್ಯೆಯ ಬೈಕ್ ಱ್ಯಾಲಿ
ರಾಯಚೂರು.ಆ.12- ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಭಾರೀ ಜನಸ್ತೋಮ ಹರಿದು ಬಂದಿದೆ.
ಕಾಂಗ್ರೆಸ್ ಪಕ್ಷದ ಪ್ರತಿಷ್ಟಿತ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಬಹುತೇಕ ಸಚಿವರು ಹಾಗೂ ಘಟಾನುಘಟಿ ಮುಖಂಡ‌ರು ಜಿಲ್ಲೆಯಲ್ಲಿ ಬಿಡಾರ ಹೂಡಿದ್ದಾರೆ.
ಕಳೆದ ಒಂದು ವಾರದಿಂದ ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷ ಭಾರೀ ಸಿದ್ಧತೆ ಮಾಡಿಕೊಂಡಿದೆ. ಇತ್ತೀಚಿಗೆ ಗುಜರಾತಿನಲ್ಲಿ ರಾಹುಲ್ ಗಾಂಧಿ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾ‌ಡಲಾಗಿದೆ. ಎಸ್ಪಿ, ಡಿವೈಎಸ್ಪಿ ಅವರ ನಿಗಾದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ರಾಹುಲ್ ಗಾಂಧಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲೆಯ ಮುಖ್ಯ ಪ್ರವೇಶ ಮಾರ್ಗವಾದ ಕೃಷಿ ವಿಶ್ವವಿದ್ಯಾಲಯ ದಾರಿ ಜನ ಜಂಗುಳಿಯಿಂದ ತುಂಬಿ ಹೋಗಿದೆ. ಸುಮಾರು 1 ಲಕ್ಷ ಸೇರಿಸುವ ಗುರಿಯೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ. ಏಳು ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಬೈಕ್‌ಗಳು ನಗರಕ್ಕೆ ಬಂದ ಕಾರಣ ಎಲ್ಲಿ ನೋಡಿದರಲ್ಲೂ ದ್ವಿಚಕ್ರ ವಾಹನಗಳದ್ದೆ ಸದ್ದಾಗಿತ್ತು. ಯುವ ಕಾಂಗ್ರೆಸ್ ಭಾರೀ ಬೃಹತ್ ಬೈಕ್ ಱ್ಯಾಲಿ ಜನರನ್ನು ಆಕರ್ಷಿಸುವಂತೆ ಮಾಡಿತು. ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 371 (ಜೆ) ರನ್ವಯ ವಿಶೇಷ ಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರನ್ನು ಹುರುಪು ತುಂಬುವ ಮತ್ತು ಈ ಭಾಗದ ಜನರಲ್ಲಿ ನಾಲ್ಕು ವರ್ಷದ ಸಾಧನೆ ಬಗ್ಗೆ ಮಾಹಿತಿ ನೀಡುವ ಉದ್ದೇಶದ ಈ ಕಾರ್ಯಕ್ರಮ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿತ್ತು.
ಬಿಜೆಪಿಗೆ ಸವಾಲೊಡ್ಡುವ ರೀತಿಯಲ್ಲಿ ಉದ್ದೇಶಿತ ಕಾರ್ಯಕ್ರಮ ಆಯೋಜಿಸಲಾಗಿ, ರೈತರ ಸಾಲ ಮನ್ನಾ ಸಾಧನೆ ಜನರಿಗೆ ಮುಟ್ಟಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡ‌ದಿರುವ ಬಗ್ಗೆ ಪ್ರಶ್ನಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಏಳು ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ಹೈದ್ರಾಬಾದ್ ಕರ್ನಾಟಕದಲ್ಲಿ ಬಿಜೆಪಿಯ ಪ್ರಭಾವ ಕುಗ್ಗುವಂತೆ ಮಾಡಿ, ಕಾಂಗ್ರೆಸ್ ಹೆಚ್ಚಿನ ಶಕ್ತಿ ತುಂಬುವುದು ಈ ಕಾರ್ಯಕ್ರಮ ಆಯೋಜನೆಯ ಹಿಂದಿನ ಮತ್ತೊಂದು ಗುರಿಯಾಗಿದೆ.
ಸುಮಾರು ಒಂದುವರೆ ಗಂಟೆ ಕಾಲ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರ ಭಾಷಣ ಕೇಂದ್ರ ಸರ್ಕಾರದ ವಿರುದ್ಧ ಎಷ್ಟು ತೀಕ್ಷ್ಣವಾಗಿರುತ್ತದೆಂಬ ಕುತೂಹಲ ಮೂಡಿದೆ. ಗುಜರಾತಿನ ಕಲ್ಲೆಸೆದ ಘಟನೆ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಕುತಂತ್ರಗಳ ನಂತರ ಕಾಂಗ್ರೆಸ್ ಪ್ರಪ್ರಥಮ ಅತಿದೊಡ್ಡ ಸಮಾವೇಶ ನಗರದಲ್ಲಿ ನಡೆಯುತ್ತಿರುವುದರಿಂದ ಇದು ದೇಶದ ಗಮನ ಸೆಳೆಯುವಂತೆ ಮಾಡಿದೆ.

Leave a Comment