ಕಾಂಗ್ರೆಸ್ ಸಚಿವರ ಹೆಸರ ಹೇಳದ್ದಕ್ಕೆ ತರಾಟೆ !

ಚಿಣ್ಣರ ದಸರಾ ವೇದಿಕೆಯಿಂದ ನಿರ್ಗಮಿಸಿದ ಸಚಿವರು
ಮೈಸೂರು, ಅ.12. ವೇದಿಕೆಯಲ್ಲಿ ಆಸೀನರಾಗಿದ್ದ ಕಾಂಗ್ರೆಸ್ ಸಚಿವರೊಬ್ಬರ ಹೆಸರನ್ನು ಹೇಳಲಿಲ್ಲ ಎಂಬ ಕಾರಣಕ್ಕೆ ಸಚಿದ್ವಯರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು, ಉದ್ಘಾಟನಾ ಕಾರ್ಯಕ್ರಮದಿಂದ ನಿರ್ಗಮಿಸಿದ ಘಟನೆಗೆ ಮಕ್ಕಳ ದಸರಾ ಕಾರ್ಯಕ್ರಮ ಸಾಕ್ಷಿಯಾಯಿತು.
ನಗರದ ಶಾರದಾ ವಿಲಾಸ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಚಿಣ್ಣರ ದಸರಾ ಕಾರ್ಯಕ್ರಮವನ್ನು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎನ್. ಮಹೇಶ್ ಉದ್ಘಾಟಿಸಬೇಕಿತ್ತು. ಆದರೆ, ಅವರ ಬದಲಿಗೆ ಇದೇ ಮೊದಲ ಬಾರಿಗೆ ದಸರಾ ಸಮಾರಂಭಗಳಲ್ಲಿ ಭಾಗವಹಿಸಿದ್ದ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರಿಂದ ಉದ್ಘಾಟಿಸಲು ತೀರ್ಮಾನಿಸಿ, ಕಾರ್ಯಕ್ರಮ ಶುರುವಾಯಿತು.
ಆದರೆ, ಕಾರ್ಯಕ್ರಮ ನಿರೂಪಿಸುತ್ತಿದ್ದ ನಿರೂಪಕಿ ವೇದಿಕೆಯಲ್ಲಿ ಆಸೀನರಾಗಿದ್ದ ಸಚಿವರ ಹೆಸರನ್ನು ಹೇಳುವಾಗ ತಡಬಡಾಯಿಸಿದರು. ಅಲ್ಲದೆ, ಸ್ವಾಗತಿಸುವಾಗ ವೇದಿಕೆಯಲ್ಲಿ ಕುಳಿತಿದ್ದ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರ ಹೆಸರನ್ನ ಹೇಳಲು ಮರೆತರು. ಇದರಿಂದ ಕುಪಿತರಾದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಸಚಿವ ಸಾ.ರಾ. ಮಹೇಶ್ ಸಿಡಿಮಿಡಿಗೊಂಡರು. ತಕ್ಷಣವೇ ಎದ್ದು ನಿಂತು ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅಸಮಾಧಾನ ವ್ಯಕ್ತಪಡಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಚಿವರ ನಡೆಯಿಂದ ಅಧಿಕಾರಿಗಳು ತಬ್ಬಿಬ್ಬಾದರು. ವೇದಿಕೆಯಲ್ಲಿ ಸಚಿವರು ಆಸೀನರಾಗದೆ, ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಿಂದ ನಿರ್ಗಮಿಸಿಯೇ ಬಿಟ್ಟರು. ಈ ಅವಾಂತರದಿಂದ ಚಿಣ್ಣರ ದಸರಾ ಸಂಭ್ರಮ ಕ್ಷಣಾರ್ಧದಲ್ಲೇ ಮಂಕಾಯಿತು.

Leave a Comment