ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಕಡಿತ – ಆಕ್ರೋಶ

ರಾಯಚೂರು.ಅ.16- ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗಾಗಿ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಬಿಡುಗಡೆಗೊಂಡ ಅನುದಾನವನ್ನು ಬಿಜೆಪಿ ಸರ್ಕಾರ ದ್ವೇಷದ ರಾಜಕೀಯದಿಂದ ಅನುದಾನ ಕಡಿತಗೊಳಿಸಲಾಗುತ್ತಿದ್ದು, ಇದೇ ರೀತಿ ದ್ವೇಷದ ರಾಜಕೀಯ ಮಾಡಿದರೇ, ಹೋರಾಟ ಮಾಡಬೇಕಾಗುತ್ತದೆಂದು ಶಾಸಕ ದದ್ದಲ ಬಸವನಗೌಡ ಅವರು ಎಚ್ಚರಿಸಿದರು.
ಅವರಿಂದು ತಾಲೂಕಿನ ಕೋರ್ವಿಹಾಳ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ಕಟ್ಟಡ ಕಾಮಗಾರಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಹಿಂದಿನ ಸರ್ಕಾರ ನೀಡಿದ ಅನುದಾನದಲ್ಲಿ ಈಗಾಗಲೇ ಕಾಮಗಾರಿಗಳಿಗೆ ಯೋಜನೆ ಸಿದ್ಧಪಡಿಸಲಾಗಿತ್ತು.
ಆದರೆ, ಸರ್ಕಾರ ಬದಲಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ ಅನುದಾನ ಕಡಿತಗೊಳಿಸಿರುವುದು ದುರದೃಷ್ಟಕರವಾಗಿದೆ. ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಸಮಗ್ರವಾಗಿ ಗಮನಿಸಬೇಕು. ಆದರೆ, ಬಿಜೆಪಿ ಗ್ರಾಮಾಂತರ ಕ್ಷೇತ್ರಕ್ಕೆ ನೀಡಿದ ಅನುದಾನ ಕಡಿತಗೊಳಿಸುವ ಮೂಲಕ ಅಭಿವೃದ್ಧಿಗೆ ಕೊಡಲಿ ಪೆಟ್ಟು ನೀ‌ಡಿದೆ. ಸರ್ಕಾರದ ಈ ಹುನ್ನಾರದಿಂದ ಅಭಿವೃದ್ಧಿ ಕಾರ್ಯ ಕುಂಟಿತಗೊಳ್ಳಲಿದೆ.
ಈ ರೀತಿಯಾದರೇ ನಾವೆಲ್ಲರೂ ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ. ಆದರೆ, ಕ್ಷೇತ್ರದ ಅಭಿವೃದ್ಧಿಗಾಗಿ ನಾನು 24 ಗಂಟೆ ಅವಿರತವಾಗಿ ಸೇವೆ ಸಲ್ಲಿಸುವ ಉದ್ದೇಶ ಹೊಂದಿವೆ. ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ನರಸನಗೌ‌ಡ, ನಗರಸಭೆ ಸದಸ್ಯ ಬಿ.ರಮೇಶ, ಸಗಮಕುಂಟಾ ಲಕ್ಷ್ಮಣ, ಮಲ್ಲೇಶ, ಭೀಮನಗೌಡ, ಅಕ್ರಂ ಪಾಷಾ, ನಾಗೇಂದ್ರಪ್ಪ ಮಟಮಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment