ಕಾಂಗ್ರೆಸ್ ಮುಖಂಡನಿಂದ ಶೂಟೌಟ್!: ಇಬ್ಬರಿಗೆ ಗಾಯ

ಉಳ್ಳಾಲದಲ್ಲಿ ತಡರಾತ್ರಿ ನಡೆದ ಘಟನೆ

ಮಂಗಳೂರು, ಸೆ.೨೩- ನಗರದ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಕಡಪರ ಎಂಬಲ್ಲಿ ನಿನ್ನೆ ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವ ಬಗ್ಗೆ ವರದಿಯಾಗಿದೆ. ತಂಡಗಳು ಮೊದಲು ಪರಸ್ಪರ ಬೀದಿಯಲ್ಲಿ ಹೊಡೆದಾಡಿಕೊಂಡಿದ್ದು ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ತನ್ನ ಲೈಸೆನ್ಸ್ ಹೊಂದಿರುವ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಗುಂಡೇಟಿಗೆ ಇರ್ಷಾದ್(೧೭) ಗಾಯಗೊಂಡಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಹೈಲ್‌ಗೆ ಸೇರಿರುವ ಇನ್ನೋವಾ ಕಾರನ್ನು ದುಷ್ಕರ್ಮಿಗಳು ಪುಡಿಗಟ್ಟಿದ್ದು ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ಸಂಬಂಧ ಎರಡೂ ತಂಡಗಳ ಒಟ್ಟು ೧೪ ಮಂದಿಯನ್ನು ಬಂಧಿಸಿ ಪಿಸ್ತೂಲ್ ಸ್ವಾಧೀನಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ವಾಟ್ಸ್ ಆಪ್ ಸ್ಟೇಟಸ್ ವಿಚಾರಕ್ಕೆ ಸಂಬಂಧಿಸಿ ಅತ್ತಾವರ ನಿವಾಸಿ ಸುಹೈಲ್ ಕಂದಕ್ ಮತ್ತಾತನ ಸಹಚರರು ಮಾತುಕತೆಗೆಂದು ನಿನ್ನೆ ತಡರಾತ್ರಿ ಉಳ್ಳಾಲದ ಖಿಲ್‌ರಿಯಾ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಇರ್ಷಾದ್, ಸಲ್ಮಾನ್ ಮತ್ತಿತರರು ಇದ್ದ ತಂಡದ ಜೊತೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಸ್ಪರ ಎರಡೂ ತಂಡಗಳ ಯುವಕರು ದೊಣ್ಣೆ, ಬ್ಯಾಟ್‌ನಿಂದ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಸುಹೈಲ್ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಅಷ್ಟರಲ್ಲಿ ರೊಚ್ಚಿಗೆದ್ದ ಗುಂಪು ಸುಹೈಲ್‌ಗೆ ಸೇರಿದ ಇನ್ನೋವಾ ಕಾರನ್ನು ಹಾನಿಗೆಡವಿದ್ದಾರೆ. ಗುಂಪು ಹಲ್ಲೆಯಿಂದ ಸುಹೈಲ್ ಕೂಡಾ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹಾಗೂ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಡಿಸಿಪಿ ಲಕ್ಷ್ಮೀ ಗಣೇಶ್, ಡಿಸಿಪಿ ಅರುಣಾಂಗ್ಸು ಗಿರಿ, ಎಸಿಪಿ ಕೋದಂಡರಾಮ, ಉಳ್ಳಾಲ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಸಿಸಿಬಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಎರಡೂ ತಂಡಗಳ ೧೪ ಮಂದಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಬಂಧಿತರನ್ನು ಮುಹಮ್ಮದ್ ಅರ್ಷದ್ ನಿಝಾಮುದ್ದೀನ್, ಫಹಾದ್, ಅಫ್ವಾನ್, ಮುಹಮ್ಮದ್, ಮುಹಮ್ಮದ್ ವಾಸಿಂ, ಅಬ್ದುಲ್ ರಹಮತುಲ್ಲಾ, ಹರ್ಷದ್, ಮುಝಮ್ಮಿಲ್, ರೈಫಾನ್, ಮುಹಮ್ಮದ್ ಸಿಯಾಬ್ ಎಂದು ಹೆಸರಿಸಲಾಗಿದೆ. ಎರಡು ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Leave a Comment