ಕಾಂಗ್ರೆಸ್, ಬಿಜೆಪಿ ಜಿದ್ದಾಜಿದ್ದಿ : ಚುನಾವಣಾ ರಣತಂತ್ರ ರೂಪಿಸುವಲ್ಲಿ ಷಾ, ರಾಹುಲ್‌ ಮಗ್ನ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೧೨ – ಮುಂಬರುವ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಿವೆ. ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಕರ್ನಾಟಕದತ್ತ ತಮ್ಮ ಚಿತ್ತವನ್ನು ಹರಿಸಿ ಮೈಲುಗೈಗಾಗಿ ಪೈಪೋಟಿ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಮೂರು ದಿನಗಳ ಭೇಟಿಗಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದು, ಆ ಪಕ್ಷದ ವಲಯದಲ್ಲಿ ನವಚೈತನ್ಯ ಮೂಡುವಂತಾಗಿದೆ. ಅದೇ ರೀತಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಇಂದು ರಾಯಚೂರಿಗೆ ಆಗಮಿಸಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಬೃಹತ್ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

‘ಸೇರಿಗೆ ಸವ್ವಾ ಸೇರು’ ಎಂಬಂತೆ ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕ ವಿಧಾನಸಭೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ನವಭಾರತದ ‘ಅಭಿನವ ಚಾಣಕ್ಯ’ ಎಂದೇ ರಾಜಕೀಯ ವಲಯದಲ್ಲಿ ಜನಪ್ರಿಯರಾಗಿರುವ ಅಮಿತ್ ಷಾ, ಕರ್ನಾಟಕದಲ್ಲಿ ಬಿಜೆಪಿಯನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸುವ ಏಕೈಕ ಉದ್ದೇಶದಿಂದ ನಗರಕ್ಕೆ ಆಗಮಿಸಿದ್ದು, ಮೂರು ದಿನಗಳ ಮೊಕ್ಕಂ ಹೂಡಿ ಪಕ್ಷದ ವಿವಿಧ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮಿತ್ ಷಾ ಅವರಿಗೆ ಬಿಜೆಪಿ ಕಾರ್ಯಕರ್ತರಿಂದ ಭವ್ಯ ಸ್ವಾಗತ ದೊರೆತಿದ್ದು, ಅಲ್ಲಿಂದ ನೇರವಾಗಿ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ವಿವಿಧ ವಲಯಗಳಲ್ಲಿನ ಸಾಧಕರು, ಚಿಂತಕರೊಂದಿಗೆ ಬಿಡುವಿನಲ್ಲದೆ ಚರ್ಚೆ ನಡೆಸಿದರು.

ನಾಳೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ನಂತರ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಅವರನ್ನೂ ಭೇಟಿ ಮಾಡುವ ಕಾರ್ಯಕ್ರಮವಿದೆ.

ಬಿಜೆಪಿ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಮುಸುಕಿನ ಗುದ್ದಾಟದಿಂದ ಪಕ್ಷದ ಸಂಘಟನೆ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಗಮನಿಸಿರುವ ಅಮಿತ್ ಷಾ, ಈ ನಾಯಕರಲ್ಲಿನ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವ ನಿಟ್ಟಿನಲ್ಲಿ ದೆಹಲಿಯಿಂದಲೇ ‘ಸಿದ್ಧೌಷಧ’ವನ್ನು ತಯಾರು ಮಾಡಿಕೊಂಡು ಬಂದಿದ್ದಾರೆ.

ಮೂರು ದಿನಗಳ ಕಾಲ ಪಕ್ಷದ ಪದಾಧಿಕಾರಿಗಳು, ಮುಖಂಡರು, ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಿರುವ ಅಮಿತ್ ಷಾ, ಒಗ್ಗಟ್ಟಿನ ಮಂತ್ರವನ್ನು ಉಪದೇಶಿಸಿ ದೆಹಲಿಗೆ ತೆರಳಲಿದ್ದಾರೆ.

ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150+ ಮಿಷನ್ ಅಭಿಯಾನವನ್ನು ಮುಂದಿಟ್ಟುಕೊಂಡು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಮುಖಂಡರು ಮತ್ತು ಕಾರ್ಯಕರ್ತರನ್ನು ಅಣಿಗೊಳಿಸುತ್ತಿದ್ದಾರೆ.

ಇಡೀ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ದೊಡ್ಡ ರಾಜ್ಯ ಎಂದು ಗುರುತಿಸಿಕೊಂಡಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಏಕೈಕ ಉದ್ದೇಶದಿಂದ ಯುವರಾಜ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಿಂದಾಗ್ಗೆ ಭೇಟಿ ನೀಡುತ್ತಿದ್ದು, ಪಕ್ಷದಲ್ಲಿ ಒಮ್ಮತ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

ಬಿಜೆಪಿಯ ಓಟಕ್ಕೆ ಕಡಿವಾಣ ಹಾಕಬೇಕು ಎಂಬ ಸಂಕಲ್ಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಗುರಿ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಅವರು ಈಗಾಗಲೇ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.

ರಾಜ್ಯ ಸರ್ಕಾರ ಕಳೆದ 4 ವರ್ಷಗಳಲ್ಲಿ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ‘ಕೆಲಸ ಮಾಡಿದ್ದೇವೆ ಮತ ಕೊಡಿ’ ಎಂಬ ಉದ್ಘೋಷದೊಂದಿಗೆ ಜನರ ಬಳಿಗೆ ತೆರಳಲು ಸಿದ್ದರಾಮಯ್ಯ ಕಾರ್ಯತಂತ್ರ ರೂಪಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಕೈಜೋಡಿಸಿದ್ದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಗುರಿಯೊಂದಿಗೆ ಅವರೂ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಯಾವುದೇ ಕಾರಣಕ್ಕೂ ನಾಯಕರಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರ ವಹಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಮೂಹಿಕ ನಾಯಕತ್ವದ ಆಧಾರದ ಮೇಲೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸರ್ವ ರೀತಿಯಲ್ಲೂ ಸಜ್ಜಾಗಿದೆ.

Leave a Comment