ಕಾಂಗ್ರೆಸ್ ನಿಂದ ರಾಮಮಂದಿರ ನಿರ್ಮಾಣ ವಿಳಂಬ

ಜಾರ್ಖಂಡ್: ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ಪ್ರಕರಣದ ಬಗ್ಗೆ ನಿರಂತರ ವಿಚಾರಣೆಗೆ ಕಾಂಗ್ರೆಸ್ ಅವಕಾಶ ನೀಡಿರಲಿಲ್ಲವಾಗಿತ್ತು. ಇದರಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಳಂಬವಾಯ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಆರೋಪಿಸಿದ್ದಾರೆ.

ಜಾರ್ಖಂಡ್ ನ ಲಾತೆಹಾರ್ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆ ಅಥವಾ ಬೇಡವೇ? ಎಂಬುದನ್ನು ನೀವು(ಜನರು) ಹೇಳಬೇಕು. ಆದರೆ ಕಾಂಗ್ರೆಸ್ ಪಕ್ಷ ಈ ಪ್ರಕರಣದ ನಿರಂತರ ವಿಚಾರಣೆಗೆ ಅವಕಾಶ ನೀಡಿರಲಿಲ್ಲವಾಗಿತ್ತು. ಇದೀಗ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕೆ ಸುಗಮ ಹಾದಿ ಕಲ್ಪಿಸಿಕೊಟ್ಟಿದೆ ಎಂದರು.

ಕಳೆದ 70 ವರ್ಷಗಳಲ್ಲಿ ನೀವು ಬುಡಕಟ್ಟು ಜನರಿಗಾಗಿ ಏನು ಮಾಡಿದ್ದೀರಿ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಆದಿವಾಸಿಗಳ ಬಗ್ಗೆ ಕೈಗೊಂಡ ಕೆಲಸದ ಬಗ್ಗೆ ಸತ್ಯಾಂಶ ಇದೆಯಾ? ನಾವು ಪ್ರತಿಯೊಂದು ಆದಿವಾಸಿ ಬ್ಲಾಕ್ ಗೆ ಏಕಲವ್ಯ ಶಾಲೆಯನ್ನು ತೆರೆದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲಾ ಖನಿಜ ನಿಧಿಯನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಶಾ ಹೇಳಿದರು.

ಜಾರ್ಖಂಡ್ ನಲ್ಲಿ ನವೆಂಬರ್ 30ರಿಂದ ಡಿಸೆಂಬರ್ 20ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. 81 ಕ್ಷೇತ್ರಗಳಿಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Leave a Comment