ಕಾಂಗ್ರೆಸ್, ಜೆಡಿಎಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು, ಸೆ.10- ತೈಲ ಬೆಲೆ ಏರಿಕೆ ನೆಪದಲ್ಲಿ ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ದೂರಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಎಲ್ಲಿ ವಿಫಲವಾಗುತ್ತೋ ಎಂಬ ಆತಂಕದಲ್ಲಿ ಸರ್ಕಾರಿ ಯಂತ್ರಕ್ಕೆ ಸರ್ಕಾರವೇ ರಜೆ ಘೋಷಣೆ ಮಾಡಿ, ಬಂದ್‍ಗೆ ನೇರ ಬೆಂಬಲ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ತಮ್ಮನ್ನು ಮುಖ್ಯಮಂತ್ರಿ ಮಾಡಿದ ಕಾರಣಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿನ ಬಂದ್‍ಗೆ ಬೆಂಬಲ ನೀಡುವ ಮೂಲಕ ರಾಹುಲ್ ಗಾಂಧಿ ಋಣ ತೀರಿಸಲು ಮುಂದಾಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಬಂದ್ ಕರೆ ಕೊಟ್ಟ ಸಂದರ್ಭಗಳಲ್ಲಿ ಬಿಜೆಪಿಯವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ವೀರಾವೇಶದ ಮಾತುಗಳನ್ನಾಡುತ್ತಿದ್ದ ಸಚಿವ ಯು.ಟಿ. ಖಾದರ್ ಈಗ ಏನು ಮಾಡುತ್ತಿದ್ದಾರೆ. ಅವರಿಗೆ ನಮ್ಮವರು ಯಾವುದರಲ್ಲಿ ಹೊಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನವರು ಪ್ರತಿದಿನ ಹೀಗೆಯೇ ಪ್ರತಿಭಟನೆ ಮಾಡುತ್ತಿರಲಿ. ರಾಹುಲ್ ಗಾಂಧಿ ಬೀದಿಗಿಳಿದು ಪ್ರತಿಭಟನೆ ಮಾಡಿದಷ್ಟೂ ನಮಗೆ ಒಳ್ಳೆಯದಾಗಲಿದೆ. ಆದರೆ, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದು ನಮ್ಮ ಆಗ್ರವಾಗಿದೆ. ಅವರನ್ನು ಇನ್ನೂ 50 ವರ್ಷ ಇದೇ ಸ್ಥಿತಿಯಲ್ಲಿ ನಾವು ಇಡುತ್ತೇವೆ. ಇನ್ನೂ 50 ವರ್ಷ ನಮ್ಮದೇ ಆಡಳಿತ ಇರಲಿದೆ ಎಂದರು.
ಇರಾನ್ ಮೇಲೆ ದಿಗ್ಭಂಧನ ವಿಧಿಸಿರುವ ಕಾರಣ ಭಾರತಕ್ಕೆ ತೈಲ ಆಮದು ಕೊರತೆ ಎದುರಾಗಿದೆ. ಭಾರತ ಅತೀ ಹೆಚ್ಚು ಕಚ್ಚಾ ತೈಲಕ್ಕೆ ಇರಾನ್ ದೇಶವನ್ನೇ ಅವಲಂಬಿಸಿದೆ. ಅರಬ್ ದೇಶಗಳ ನಡುವಿನ ತಿಕ್ಕಾಟದಿಂದ ತೈಲ ಉತ್ಪಾದನೆ ಹೆಚ್ಚಾಗದ ಕಾರಣ ಸಮಸ್ಯೆ ತಲೆದೋರಿದೆ. ಇದರೊಂದಿಗೆ ಬಿಜೆಪಿಯೇತರ ಸರ್ಕಾರಗಳಿಂದ ಪೆಟ್ರೋಲ್ ಉತ್ಪನ್ನಗಳ ಮೇಲೆ ಅತೀ ಹೆಚ್ಚು ತೆರಿಗೆ ವಿಧಿಸಲಾಗಿದೆ. ಜನರ ಮೇಲೆ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಕಾಳಜಿ ಇದ್ದರೆ ತೈಲೋತ್ಪನ್ನಗಳ ಮೇಲೆ ವಿಧಿಸಿರುವ ಶೇ. 2ರಷ್ಟು ತೆರಿಗೆಯನ್ನು ಕಡಿತ ಮಾಡಿ, ಆನಂತರ ಮಾತನಾಡಲಿ ಎಂದು ಸವಾಲು ಹಾಕಿದರು.
ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಪೆಟ್ರೋಲ್ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ದವಿದೆ. ಪೆಟ್ರೋಲ್ ಎಂದ ತಕ್ಷಣ ಅದು ಸಂಪೂರ್ಣ ಕೇಂದ್ರ ಸರ್ಕಾರದ ಹೊಣೆಯಲ,್ಲ ಪೆಟ್ರೋಲ್ ಹಾಗೂ ಮದ್ಯ ಮಾರಾಟವನ್ನ ಜಿ.ಎಸ್.ಟಿ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಮುಂದಾಗಲಿ. ಆಗ ಅವರ ನೈಜ ಬಂಡವಾಳ ಬಯಲಾಗುತ್ತದೆಂದು ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದರು. ಮದ್ಯದಂಗಡಿಗಳ ನವೀಕರಣವನ್ನ ಅನ್‍ಲೈನ್ ಮಾಡಿದ್ದರಿಂದ ಅಧಿಕಾರಿಗಳು, ರಾಜಕಾರಣಿಗಳ ವಶೀಲಿ ಬಾಜಿಗೆ ಲಗಾಮು ಬೀಳಲಿತ್ತು. ಅಷ್ಟರಲ್ಲೇ ಈ ಸಮ್ಮಿಶ್ರ ಸರ್ಕಾರ ದಕ್ಷ ಅಬಕಾರಿ ಆಯುಕ್ತರನ್ನ ಎತ್ತಂಗಡಿ ಮಾಡಿದೆ ಎಂದು ಟೀಕಿಸಿದರು.

Leave a Comment