ಕಾಂಗ್ರೆಸ್, ಜಾದಳ, ಬಿಜೆಪಿ : ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲ

ಜು.21 ನರಗುಂದ ಬರಮುಕ್ತ ಕರ್ನಾಟಕ ಆಂದೋಲನಾ
ರಾಯಚೂರು.ಜೂ.13- ರಾಜ್ಯ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾದ ಆಡಳಿತ ಮತ್ತು ವಿರೋಧ ಪಕ್ಷಗಳ ವಿರುದ್ಧ ಜುಲೈ 21 ರಂದು ನರಗುಂದ ಬರಮುಕ್ತ ಕರ್ನಾಟಕ ಆಂದೋಲನಾ ಹಮ್ಮಿಕೊಳ್ಳಲಾಗುತ್ತದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾಗೇಂದ್ರ ಬಡಲಾಪೂರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, 164 ತಾಲೂಕುಗಳಲ್ಲಿ ಬರ ಆವರಿಸಿದೆ. ಕಾಂಗ್ರೆಸ್, ಜಾದಳ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿಯ ಜನಪ್ರತಿನಿಧಿಗಳಿಗೆ ಹಬ್ಬವಾಗಿದೆ. ಬರದ ಹೆಸರಲ್ಲಿ ಅಧಿಕಾರಿಗಳು ಹಣ ಲೂಟಿಯಲ್ಲಿ ತೊಡಗಿದ್ದಾರೆಂದು ದೂರಿದ ಅವರು, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವಲ್ಲಿ ತೋರುವ ಆಸಕ್ತಿ, ರೈತರ ಸಮಸ್ಯೆ ನಿವಾರಿಸುವಲ್ಲಿ ಆಡಳಿತರೂಢ ಪಕ್ಷಗಳು ತೋರುತ್ತಿಲ್ಲವೆಂದು ಆರೋಪಿಸಿದರು.
ಭೀಕರ ಬರದಿಂದ ಗ್ರಾಮಾಂತರ ಪ್ರದೇಶದಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ. ಸರ್ಕಾರದ ವೈಫಲ್ಯ ವಿರುದ್ಧ ಧ್ವನಿಯೆತ್ತಬೇಕಾದ ವಿರೋಧ ಪಕ್ಷವಾದ ಬಿಜೆಪಿ ತನ್ನ ಬಲವನ್ನೇ ಕಳೆದುಕೊಂಡಿದೆ. ರೈತರು ಗಂಭೀರ ಸಮಸ್ಯೆಯಲ್ಲಿರುವಾಗ ಬಿಜೆಪಿ ರಾಜ್ಯ ಸರ್ಕಾರ ಉರುಳಿಸುವುದಕ್ಕೆ ಗಮನ ನೀಡುತ್ತಿರುವುದು ಇವರ ರೈತ ಪರ ಕಾಳಜಿಗೆ ನಿದರ್ಶನವಾಗಿದೆಂದ ಅವರು, ರೈತರ ಪಾಲಿಗೆ ಆಡಳಿತರೂಢ ಮತ್ತು ವಿರೋಧ ಪಕ್ಷ ಸತ್ತಿವೆ ಎನ್ನುವ ವಾತಾವರಣ ರಾಜ್ಯದಲ್ಲಿದೆ. ಇವರಿಗೆ ಆಡಳಿತ ನಡೆಸುವ ಯೋಗ್ಯತೆ? ಇಲ್ಲ. ವಿಧಾನಸೌಧ ಬಿಟ್ಟು ತೊಲಗಿ ಎಂದು ಆಗ್ರಹಿಸಿದರು.
ದೇಶದಲ್ಲಿ ಶೇ.45 ರಷ್ಟು ಬರಗಾಲ ಆವರಿಸಿದೆ. ರಾಜ್ಯದಲ್ಲಿ ಪ್ರತಿ ವರ್ಷವೂ ಶೇ.16 ರಷ್ಟು ರೈತರು ಬರಕ್ಕೆ ತುತ್ತಾಗುತ್ತಿದ್ದಾರೆ. ಬರಗಾಲದಲ್ಲಿ ರಾಜ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅನೇಕ ಕಡೆ ಜಲಮೂಲ ಬತ್ತಿ ಹೋಗಿವೆ. ಕೃಷಿ ಸಂಪೂರ್ಣ ಸ್ಥಗಿತಗೊಂಡಿದೆ. ಪರಿಸರ ಸಮಾತೋಲನಕ್ಕಾಗಿ ಏನೆಲ್ಲಾ ಯೋಜನೆ ರೂಪಿಸಿದ್ದರೂ, ಅನುಷ್ಠಾನ ಮಾತ್ರ ಶೂನ್ಯವಾಗಿದೆ. ಬರ ಮುಕ್ತ ಕರ್ನಾಟಕ ಆಂದೋಲನದಡಿ ಜುಲೈ 29 ರಂದು ಚಿತ್ರದುರ್ಗದಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 30 ರಂದು ತುಂಗಾ ಕಣಿವೆ ಪ್ರದೇಶದಲ್ಲಿ ರೈತರಿಗೆ ಮಳೆ ಕೊಯ್ಲು ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಜಲ ತಜ್ಞ ರಾಜೇಂದ್ರ ಸಿಂಗ್ ಅವರು ಮಾರ್ಗದರ್ಶಕರಾಗಿದ್ದಾರೆ. ಕೆರೆ ಒತ್ತುವರಿ, ಮರಳು ದಂಧೆ ಕಡಿವಾಣ ಸೇರಿದಂತೆ ರಾಜ್ಯ ಪ್ರವಾಸ ಕೈಗೊಂಡು ರೈತರ ಸಮಸ್ಯೆ ಆಲಿಸಿ, ಕರಡು ರಚಿಸಿ, ಜುಲೈ 31 ರಂದು ನೇರವಾಗಿ ರಾಜ್ಯಪಾಲರನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಕುರಿತು ಮಾಧ್ಯಮದವರು ಸಾಕ್ಷಿ ಸಮೇತ ವರದಿಗಳನ್ನು ಪ್ರಕಟಿಸುತ್ತಿದ್ದು, ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸ ಮುಖ್ಯಮಂತ್ರಿ ಮಾಡುತ್ತಿದ್ದು, ಅವರಿಗೆ ಯಾವುದೇ ನೈತಿಕತೆಯಿಲ್ಲ. ಸಾಲ ಮನ್ನಾ ಭರವಸೆಗೆ ಮುಖ್ಯಮಂತ್ರಿ ಬದ್ಧರಾಗಿ ನಡೆದುಕೊಳ್ಳುತ್ತಿಲ್ಲ. ಇದುವರೆಗೂ ರೈತರಿಗೆ ಋಣಮುಕ್ತ ಪತ್ರ ನೀಡಿರುವುದಿಲ್ಲ. ರೈತ ಸಾಲ ಮನ್ನಾ ಕುರಿತು ಶ್ವೇತಾ ಪತ್ರ ಹೊರಡಿಸುವ ಮೂಲಕ ಗೊಂದಲ ಪರಿಹರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಬಿ.ಟಿ.ರಾಮಸ್ವಾಮಿ, ಎಂ.ರಾಮು, ಗೋಪಾಲ ಉಪಸ್ಥಿತರಿದ್ದರು.

Leave a Comment