ಕಾಂಗ್ರೆಸ್ ಕಾಯಿಲೆ ಓವೈಸಿ ಕಿಡಿ

ಮೈಸೂರು,ಆ.೨೫- ನನ್ನ ತಾತ ಕಾಂಗ್ರೆಸ್ಸಿಗೆ ಮತ ಹಾಕುತ್ತಿದ್ದ, ನನ್ನ ಅಪ್ಪ ಕಾಂಗ್ರೆಸ್ಸಿಗೆ ಮತ ಹಾಕುತ್ತಿದ್ದ ಆದ್ದರಿಂದ ನಾನೂ ಕಾಂಗ್ರೆಸ್ಸಿಗೇ ಮತ ಹಾಕುತ್ತೇನೆ ಎಂದು ಯೋಚಿಸುವುದನ್ನು ಮುಸ್ಲಿಮರು  ಬಿಡಬೇಕು ಎಂದು ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.

ಮೈಸೂರಿನಲ್ಲಿ ನಿನ್ನೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಜನರ ಔಷಧಿ ಅಲ್ಲ, ಅದು ಒಂದು ಕಾಯಿಲೆ’. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮುಸ್ಲಿಮರು ಹಾಗೂ ದಲಿತರ ವಿರೋಧಿಗಳು. ನಾವು ಕಾಂಗ್ರೆಸ್, ಮೋದಿ ಹಾಗೂ ಆರೆಸ್ಸೆಸ್‌ನ ಗುಲಾಮರಲ್ಲ ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಎಚ್ಚರಿಸಿದರು.

ಮುಸ್ಲಿಮರ ಹೋರಾಟಗಳಿಗೆ ದಲಿತರು ಮಾದರಿಯಾಗಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಸಡಿಲಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ದೇಶದ ಎಲ್ಲ ದಲಿತರು ಒಟ್ಟಾಗಿ ಭಾರತ ಬಂದ್ ಮಾಡಿ ತೀರ್ಪು ಹಿಂಪಡೆಯುವಂತೆ ಮಾಡಿದರು. ಆದರೆ, ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಆದೇಶ ನೀಡಿದಾಗ ಈ ದೇಶದ ಮುಸ್ಲಿಮರು ಏನು ಮಾಡುತ್ತಿದ್ದರು?’ ಎಂದು ಪ್ರಶ್ನಿಸಿದ ಅವರು, ಹೋರಾಟ ಮಾಡುವವನಿಗೆ ಗೆಲುವು ಸಿಕ್ಕೇ ಸಿಗುತ್ತದೆ. ನಮ್ಮ ಆಯ್ಕೆ ಯಾವುದಾಗಬೇಕೆಂದು ಯುವಕರು ತೀರ್ಮಾನಿಸಬೇಕು, ಹೆದರಿ ನಿಮ್ಮ ಹಕ್ಕುಗಳನ್ನು ಬಿಟ್ಟುಕೊಡಬೇಡಿ’ ಎಂದು ಸಲಹೆ ನೀಡಿದರು.

‘ಓವೈಸಿ ಬದುಕಿರುವುದೇ ಸಂವಿಧಾನ ಬದ್ಧವಾಗಿ ಮುಸ್ಲಿಮರಿಗೆ ಇರುವ ಹಕ್ಕುಗಳನ್ನು ಜಾರಿಗೊಳಿಸಲು. ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ದಲಿತರು, ಮುಸ್ಲಿಮರ ಶ್ರೇಯಸ್ಸಿದೆ. ಅದನ್ನು ಜಾರಿಗೊಳಿಸಿ ಎಂದು ಕೇಳುವುದು ಪ್ರಚೋದನಾಕಾರಿಯಾಗುತ್ತದೆಯೇ?, ಓವೈಸಿ ಕೆಟ್ಟವನು ಎಂದಾದರೆ, ಈ ದೇಶದ ಅತೀ ಒಳ್ಳೆಯ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿಯೇ’ ಎಂದು ವ್ಯಂಗ್ಯವಾಡಿದರು.

Leave a Comment