ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಮುನಿಯಪ್ಪ ಕಣ್ಣು

ನವದೆಹಲಿ, ಜೂ. ೧೩- ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯುವುದಾಗಿ ಕೋಲಾರ ಸಂಸದೆ ಕೆ.ಎಚ್. ಮುನಿಯಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ಪಾಳೆಯದಲ್ಲಿ ತೀವ್ರ ಪೈಪೋಟಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುನಿಯಪ್ಪ ಈ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದಲ್ಲಿ ಬದ್ಧನಾಗಿದ್ದೇನೆ.
ಇತ್ತೀಚೆಗೆ ನಡೆದ ಸಂಸದರ ಸಭೆಯಲ್ಲಿ ಕೆಲವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಸೂಚಿಸಿದ್ದಾರೆ. ಒಂದು ವೇಳೆ ಅವಕಾಶ ನೀಡಿದರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಇದು ಸಾಧ್ಯವಾಗದಿದ್ದರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.
ಈ ಹಿಂದೆಯೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎರಡು ಬಾರಿ ತಮ್ಮ ಹೆಸರು ಸೂಚಿಸಿದರು. ಆದರೆ ಇದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿದೆ. ತಮಗೂ ಒಂದು ಅವಕಾಶ ಕೊಟ್ಟರೇ ಸಮರ್ಥವಾಗಿ ಕೆಲಸ ಮಾಡುತ್ತೇನೆ. ತಮ್ಮನ್ನು ಹೊರತುಪಡಿಸಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಬೇರೆಯವರಿಗೆ ಕೊಟ್ಟರು ಅದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಬಿ.ಕೆ. ಹರಿಪ್ರಸಾದ್ ಸಿ.ಎಲ್.ಪಿ ನಾಯಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್‌ಗೆ ಕೊಟ್ಟರು. ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿ ಅತೃಪ್ತ ಶಾಸಕರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಹೈಮಾಂಡ್ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು. ಮೈತ್ರಿ ಸರ್ಕಾರ ಸಮನ್ವಯ ಸಮಿತಿ ರಚನೆ ಮಾಡಲಾಗಿತ್ತು. ಎಲ್ಲರೂ ಒಟ್ಟಾರೆ ಕೆಲಸ ಮಾಡುತ್ತಾರೆ. ಸರ್ಕಾರ ರಚನೆ ಸಂದರ್ಭದಲ್ಲಿ ಸಹಜವಾಗಿಯೇ ಒತ್ತಡಗಳು ಬರುತ್ತವೆ. ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

Leave a Comment