ಕಾಂಗ್ರೆಸ್‍ನಂತೆ ಬಿಜೆಪಿಯದೂ ರೈತ ವಿರೋಧಿ ಆಡಳಿತ

ಹುಳಿಯಾರು, ಫೆ. ೧೩- ಚುನಾವಣಾ ಪೂರ್ವ ಡಾ.ಸ್ವಾಮಿನಾಥ್ ವರದಿ ಜಾರಿಗೆ ತರುವುದರ ಜತೆಗೆ ರೈತ ಪರ ಸರ್ಕಾರ ಮಾಡುವುದಾಗಿ ಭರವಸೆ ನೀಡಿದ್ದ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಕೊಟ್ಟ ಮಾತು ಮರೆತು ಶ್ರೀಮಂತರ ಪರ ಸರ್ಕಾರ ನಡೆಸುತ್ತಿದ್ದಾರೆ ಎಂದು ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಆರೋಪಿಸಿದರು.

ಹುಳಿಯಾರು ಸಮೀಪದ ಬರಕನಹಾಲ್ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ರೈತ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು, ದೇಶದಲ್ಲಿ ಸಂಪೂರ್ಣ ನೀರಾವರಿ ವ್ಯವಸ್ಥೆ ಮಾಡುವುದು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು, ರೈತ ಸಂಘದ ಪ್ರಮುಖ ಬೇಡಿಕೆಗಳಾಗಿವೆ. 35 ವರ್ಷಗಳಿಂದ ಯಾವ ಸರ್ಕಾರಗಳೂ ಈ ಬೇಡಿಕೆಗಳನ್ನು ಈಡೇರಿಸಿಲ್ಲವಾಗಿದ್ದು, ತಾನು ಪ್ರಧಾನಿಯಾದರೆ ಈಡೇರಿಸುವುದಾಗಿ ಮೋದಿ ಅವರು ಭರವಸೆ ನೀಡಿದ್ದರು. ಆದರೆ ಹಿಂದಿನ ಸರ್ಕಾರಗಳಂತೆ ಇವರೂರೈತ ವಿರೋಧಿ ಆಡಳಿತ ಮಾಡುತ್ತಿದ್ದಾರೆ ಎಂದು ಕುಟುಕಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಧನಂಜರಾಧ್ಯ ಮಾತನಾಡಿ, 90ರ  ದಶಕಗಳಿಂದೀಚೆಗೆ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಕಳೆದ 10 ವರ್ಷಗಳಲ್ಲಿ 5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ರೈತರ ಹಿತ ಕಾಯುವಲ್ಲಿ ಸರ್ಕಾರಗಳು ವಿಫಲರಾಗಿರುವುದರ ನಿದರ್ಶನವಾಗಿದೆ. ಅಲ್ಲದೆ ರೈತರ ಆತ್ಮಹತ್ಯೆಗಳು ಕೃಷಿ ಪ್ರಧಾನ ದೇಶವಾದ ಭಾರತದ ಪ್ರಗತಿಗೆ ಮಾರಕವಾದುದ್ದಾಗಿದೆ. ಇದನ್ನು ಇನ್ನಾದರೂ ರಾಜಕಾರಣಿಗಳು ಮನಗಂಡು ರೈತರಿಗೆ ನೀರು, ವಿದ್ಯುತ್, ಬೆಲೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಂಡಿಮನೆ ಲೋಕೇಶ್ ಮಾತನಾಡಿ, ದೇಶದಲ್ಲಿ ಗ್ರಾ.ಪಂ.ನಿಂದ ಲೋಕಸಭೆವರೆವಿಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಇಂತಿಷ್ಟು ಹಣ ಕೊಡಲೇಬೇಕೆಂಬ ಲಿಖಿತ ನಿಯಮ ಜಾರಿಯಲ್ಲಿದೆ. ಇದನ್ನು ಪ್ರಶ್ನಿಸುವ ನೈತಿಕತೆ ಇರುವುದು ರೈತ ಸಂಘಗಳಿಗೆ ಮಾತ್ರ. ಹಾಗಾಗಿ ಹಳ್ಳಿಹಳ್ಳಿಗಳಲ್ಲಿ ರೈತ ಸಂಘ ಕಟ್ಟಿ ರೈತರೆಲ್ಲರೂ ಒಗ್ಗಟ್ಟಾಗಿ ಹೋರಾಟ ರೂಪಿಸಬೇಕಿದೆ. ಈ ಮೂಲಕ ಸಮಾಜ ಬದಲಾಯಿಸದಿದ್ದರೂ ಸಂಘಟನೆಯ ಸದಸ್ಯರಾದರೂ ಲಂಚ ರಹಿತ ಕೆಲಸ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಇನ್ನೂ ಕೃಷಿಗೆ ಮೂಲ ಸೌಕರ್ಯ ಸಿಕ್ಕಿಲ್ಲ. ಈ ರಾಜಕಾರಣಿಗಳನ್ನು ನಂಬಿದರೆ ರೈತನ ಏಳ್ಗೆ ಅಸಾಧ್ಯ. ಹಾಗಾಗಿ ರೈತರನ್ನೇ ಗೆಲ್ಲಿಸಿ ರೈತ ಸರ್ಕಾರ ತನ್ನಿ ಎಂದು 25 ವರ್ಷಗಳಿಂದ ರೈತ ಸಂಘ ಚುನಾವಣಾ ಕಣದಲ್ಲಿದೆ. ಆದರೆ ಇದೂವರೆವಿಗೂ ಒಬ್ಬರನ್ನೂ ಜನ ಗೆಲ್ಲಿಸಿಲ್ಲ. ಹೋರಾಟಕ್ಕೆ ನಾವು ಬೇಕು, ಅಧಿಕಾರಕ್ಕೆ ಅವರು ಬೇಕು ಎನ್ನುವಂತಾಗಿದೆ ದೇಶದ ಸ್ಥಿತಿ. ಇನ್ನಾದರೂ ಬದಲಾಗಿ ರೈತರನ್ನು ಚುನಾವಣೆಯಲ್ಲಿ ಗೆಲ್ಲಿಸಿ. ಇಲ್ಲವಾದರೆ ನೀವೇ ಓಡಾಡಿ ಗೆಲ್ಲಿಸುವ ರಾಜಕಾರಣಿಯಿಂದಾದರೂ ಕೊರಳಪಟ್ಟಿ ಹಿಡಿದು ಒಂದಿಷ್ಟು ಕೆಲಸ ಮಾಡಿಸಿ ಎಂದರು.

ಕಾರ್ಯಕ್ರಮದಲ್ಲಿ ಸಿರಾ ರೈತ ಸಂಘದ ಎಸ್.ಗೋವಿಂದಪ್ಪ, ಗ್ರಾ.ಪಂ. ಸದಸ್ಯ ಕಾಡಿನರಾಜ ನಾಗರಾಜು, ಅರಳೀಕೆರೆ ಪ್ರಕಾಶಣ್ಣ, ಪಾತ್ರೆ ಸತೀಶ್, ಸಜ್ಜಾದ್, ದಾಸಪ್ಪ, ಸಿದ್ಧರಾಮಣ್ಣ, ಸೀಗೇಬಾಗಿ ಲೋಕೇಶ್, ಬರಕನಹಾಲ್ ರೈತ ಸಂಘದ ರಾಕೇಶ್, ಚರಣ್, ಚಂದ್ರಪ್ರಕಾಶ್, ಅಶೋಕ್, ರಘುಕುಮಾರ್, ಆನಂದ್, ಸುಮಂತ್, ಪರಮೇಶ್, ಶೇಖರಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Comment