ಕಾಂಗ್ರೆಸ್‌ ಪಕ್ಷ ಸಂಕಷ್ಟದಲ್ಲಿದೆ: ಈಶ್ವರ್‌ ಖಂಡ್ರೆ

ಬೆಂಗಳೂರು, ಜು.14- ಕಾಂಗ್ರೆಸ್‌ ಪಕ್ಷ ಸಂಕಷ್ಟದಲ್ಲಿದ್ದು, ಇಂಥ ಸ್ಥಿತಿಯಲ್ಲಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯಬೇಕೆಂದು ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಅವರ ಬಳಿ ಮನವಿ ಮಾಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಪಕ್ಷದ ಮುಖಂಡ, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಜೊತೆ ರಾಮಲಿಂಗಾರೆಡ್ಡಿ ಅವರನ್ನು ಭಾನುವಾರ ಭೇಟಿ ಮಾಡಿದ ಬಳಿಕ ಖಂಡ್ರೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್‌ ಪಕ್ಷ ಇಂದು ಸಂಕಷ್ಟದಲ್ಲಿದೆ. ಆದರೆ, ಸಮ್ಮಿಶ್ರ ಸರ್ಕಾರ ಪತನವಾಗುವುದಿಲ್ಲ. ಯಾವುದೇ ಊಹಪೋಹಗಳಿಗೆ ಕಿವಿಗೊಡದೆ ಕಾದು ನೋಡಿ. ರಾಮಲಿಂಗಾ ರೆಡ್ಡಿಯವರಂತಹ ಹಿರಿಯ ನಾಯಕರು ಪಕ್ಷದೊಂದಿಗೆ ಇರಬೇಕು. ಹೀಗಾಗಿ ಅವರನ್ನು ಭೇಟಿ ಮಾಡಿ ರಾಜೀನಾಮೆ ವಾಪಾಸ್‌ ಪಡೆಯುವಂತೆ ಮನವಿ ಮಾಡಿದ್ದೇವೆ ಎಂದು ಖಂಡ್ರೆ ಹೇಳಿದರು.
ಎಚ್‌.ಕೆ.ಪಾಟೀಲ್‌ ಮಾತನಾಡಿ, ರೆಡ್ಡಿ ಅವರು ಪಕ್ಷದ ಹಿರಿಯರು. ಹೀಗಾಗಿ ಅವರು ಪಕ್ಷದೊಂದಿಗೆ ಉಳಿದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ವೈಯಕ್ತಿಕ ಸ್ನೇಹಿತರಾಗಿಯೂ ನಾವು ಈ ಬಗ್ಗೆ ಅವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಪಕ್ಷದ ಹಲವು ಹಿರಿಯ ಮುಖಂಡರು ರೆಡ್ಡಿ ಅವರ ಜೊತೆ ಚರ್ಚಿಸಿ, ಗೊಂದಲಗಳನ್ನು ನಿವಾರಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಕೆಲವು ತಪ್ಪುಗಳಾಗಿರಬಹುದು. ಈಗ ಆ ಬಗ್ಗೆ ಚರ್ಚೆ ಬೇಡ. ರೆಡ್ಡಿ ಅವರಿಗೆ ಕಾಂಗ್ರೆಸ್‌ ಕುರಿತು ಕಾಳಜಿ ಇದೆ. ಹೀಗಾಗಿ ಅವರು ನಮ್ಮ ಮನವಿಗೆ ಸ್ಪಂದಿಸಿ ಪಕ್ಷಕ್ಕೆ ಮರಳುತ್ತಾರೆ ಎಂದರು.
ರೆಡ್ಡಿ ಅವರ ಮನಸ್ಸಿಗೆ ನೋವಾಗಿದೆ. ಅದನ್ನು ಅವರ ಪುತ್ರಿ ಸೌಮ್ಯ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ವರಿಷ್ಠರಾದ ಸೋನಿಯಗಾಂಧಿ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾರೆ. ಎಲ್ಲವೂ ಸರಿಯಾಗುತ್ತದೆ. ರೆಡ್ಡಿ ಈಗಾಗಲೇ ಪಕ್ಷದ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪಾಟೀಲ್‌ ತಿಳಿಸಿದರು.

Leave a Comment