ಕಾಂಗ್ರೆಸ್‌ನಿಂದ ಛಲವಾದಿ ಮುಖಂಡರಿಗೆ ವಂಚನೆ

 ದಿ.21 ಬೆಂಗಳೂರಿನಲ್ಲಿ ರಾಜ್ಯಮಟ್ಟ ಸಮಾವೇಶ
ರಾಯಚೂರು.ಜು.17- ನಾಮಕರಣ ಪ್ರಕ್ರಿಯೆಯ ಸ್ಥಾನಮಾನ ನೀಡುವಲ್ಲಿ ಆಡಳಿತ ರೂಢ ಕಾಂಗ್ರೆಸ್ ಸರ್ಕಾರ ಛಲವಾದಿ ಮುಖಂಡರಿಗೆ ವಂಚನೆ ಮುಂದುವರೆಸಿದೆಂದು ಆರೋಪಿಸಿದ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ರವಿಂದ್ರನಾಥ ಪಟ್ಟಿ, ಈ ಅನ್ಯಾಯ ಸರಿಪಡಿಕೆಗೆ ಸಾಮಾಜಿಕ ನ್ಯಾಯದಲ್ಲಿ ಛಲವಾದಿಗಳ ಪಾತ್ರ ಕುರಿತು ದಿ.21 ರಂದು ಬೆಂಗಳೂರಿನ ಕಬ್ಬನ್‌ಪಾರ್ಕ್‌ನಲ್ಲಿ ರಾಜ್ಯಮಟ್ಟದ ವಿಚಾರ-ವಿನಿಮಯ ಸಮಾವೇಶ ಆಯೋಜಿಸಲಾಗಿದೆಂದರು.

ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಛಲವಾದಿ ಸಮುದಾಯ ಬೆಂಬಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ ಸಮುದಾಯ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡದೆ ವಂಚಿಸಲಾಗಿದೆ. ಪ್ರಸ್ತುತವರೆಗೂ ರಾಜ್ಯದ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ನಿರ್ದೇಶಕರನ್ನಾಗಿ ಸಮಾಜದ ಯಾವುದೇ ಮುಖಂಡರನ್ನು ನೇಮಕ ಮಾಡದೆ ಮಲತಾಯಿ ಧೋರಣೆ ಮುಂದುವರೆದಿದೆ.
ಸ್ಥಳೀಯ ಸಂಸ್ಥೆ, ಇತರೆ ನಿಗಮ ಮಂಡಳಿಗಳಿಗೂ ಯಾವುದೇ ಛಲವಾದಿ ಸದಸ್ಯರನ್ನು ನಾಮಕರಣ ಮಾಡದೆ ನಿರ್ಲಕ್ಷಿಸಲಾಗಿದೆ. ಆರ್‌ಡಿಎ ನಾಮಕರಣದಲ್ಲಿಯೂ ಜಿ.ಪಂ., ತಾ.ಪಂ.ಗೆ ಸ್ಪರ್ಧಿಸಿ ಪರಾಭವಗೊಂಡ ಸದಸ್ಯರನ್ನು ನಾಮಕರಣ ಮಾಡಿ, ವಿಶ್ವವಿದ್ಯಾಲಯಗಳಿಗೆ ನಿರ್ದೇಶಕರ ನಾಮಕರಣದಲ್ಲಿಯೂ ಪಕ್ಷಕ್ಕೆ ಬೆಂಬಲಿಸಿದ ಸಮುದಾಯಕ್ಕೆ ಯಾವುದೇ ಸ್ಥಾನಮಾನ ನೀಡದೆ ಕಡೆಗಣಿಸಲಾಗಿದೆ.

ಅಸ್ಪೃಶ್ಯ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರುವ ನಿಟ್ಟಿನಲ್ಲಿ ದಿ.21 ರಂದು ಬೆಂಗಳೂರಿನ ಕಬ್ಬನ್‌ಪಾರ್ಕ್ ಎನ್‌ಜಿಓ ಭವನದಲ್ಲಿ ಸಾಮಾಜಿಕ ನ್ಯಾಯ ಛಲವಾದಿಗಳ ಪಾತ್ರ ಕುರಿತು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡ ರಾಜ್ಯ ಮಟ್ಟದ ವಿಚಾರ-ವಿನಿಮಯ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಉದ್ಘಾಟಿಸಲಿದ್ದು, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಅಧ್ಯಕ್ಷತೆವಹಿಸಲಿದ್ದಾರೆ.
ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪ್ರಮುಖರು ಮುಖ್ಯಾತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾಜದ ಬುದ್ಧಿಜೀವಿ, ಹಿತಚಿಂತಕರು ಅಂದು ನಡೆಯುವ ಸಮಾವೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಭಾಜನರಾಗುವಂತೆ ಕೋರಿದರು.

ಗೌರವಾಧ್ಯಕ್ಷ ರವಿ ಕುಮಾರ, ಶ್ರೀನಿವಾಸ ಮಾಚರ್ಲಾ, ವಿಶ್ವನಾಥ ಪಟ್ಟಿ, ಭೀಮಣ್ಣ, ತಾಯಪ್ಪ ದಿನ್ನಿ, ಮಲ್ಲೇಶ ಕೊಲಮಿ, ಕೆ.ಇ.ಕುಮಾರ, ಆರ್.ತಿಮ್ಮಾರೆಡ್ಡಿ, ಭಾಸ್ಕರರಾಜ್, ಪ್ರಾಣೇಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment