ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ- ದಿನೇಶ್ ಸಮರ್ಥನೆ

ಬೆಂಗಳೂರು, ಸೆ. ೧೧- ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಗೊಂದಲಗಳಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿ ರಾಜಕಾರಣ ವಿವಾದದ ಹಿನ್ನೆಲೆಯಲ್ಲಿ ಜಾರಕಿಹೊಳಿ ಸೋದರರ ಜೊತೆಗೆ ಒಟ್ಟು 20 ಶಾಸಕರು ಬಿಜೆಪಿ ಸೇರಲಿದ್ದಾರೆ. ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿದ್ದವು. ಅವುಗಳ ಬಗ್ಗೆ ಜಾರಕಿಹೊಳಿ ಸಹೋದರರೊಂದಿಗೆ ಮಾತುಕತೆ ನಡೆಸಿ ಬಗೆ ಹರಿಸಿದ್ದೇವೆ. ಯಾರೂ ಕಾಂಗ್ರೆಸ್ ತೊರೆಯುವುದಿಲ್ಲ. ಇದೆಲ್ಲಾ ಬಿಜೆಪಿಯವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರಷ್ಟೇ ಎಂದು ದಿನೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಆರಂಭಕ್ಕೂ ಮುಂಚಿನ ದಿನಗಳಿಂದಲೇ ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ವಿಫಲರಾಗಿದ್ದಾರೆ. ಈಗ ಅದೇ ಸರ್ಕಸ್ ಆರಂಭಿಸಿದ್ದು, ನಮ್ಮ ಶಾಸಕರಾರು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ದೊಡ್ಡ ಪಕ್ಷ ಅಂದ ಮೇಲೆ ಸಣ್ಣ ಪುಟ್ಟ ವೈ ಮನಸ್ಸುಗಳಿದ್ದೇ ಇರುತ್ತವೆ. ಆದರೆ ಅಂತಹ ಸಮಸ್ಯೆಗಳಿದ್ದಲ್ಲಿ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಅಧ್ಯಕ್ಷರು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಹೇಳಿದಂತಿತ್ತು.

Leave a Comment