ಕಾಂಗರೂ ಪಡೆಗೆ ಆಘಾತ ೧೦೪ಕ್ಕೆ ೪ವಿಕೆಟ್ ಅಶ್ವಿನ್-ಶಮಿ ಮಾರಕ ಬೌಲಿಂಗ್

ಅಡಿಲೇಡ್, ಡಿ ೯- ಇಲ್ಲಿನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ೪ನೇ ದಿನದಾಟದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ದಾಳಿಗೆ ಆಸೀಸ್ ತತ್ತರಿಸಿ ಹೋಗಿದ್ದು, ದಿನದ ಅಂತಕ್ಕೆ ೪ ವಿಕೆಟ್ ಕಳೆದುಕೊಂಡು ೧೦೪ ರನ್ ಕಲೆಹಾಕಿತ್ತು.

ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ೩೨೩ ರನ್‌ಗಳ ಕಠಿಣ ಗುರಿ ನೀಡಿದ್ದು, ಸವಾಲಿನ ಗುರಿ ಬೆನ್ನತ್ತಿರುವ ಆಸೀಸ್ ಎಚ್ಚರಿಕೆಯ ಆಟ ಮುಂದುವರೆಸಿ ಆಟವಾಡುತ್ತಿದೆ. ಆದರೆ ಟೀಂ ಇಂಡಿಯಾ ನೀಡಿದ್ದ ಕಠಿಣ ಸವಾಲು ಬೆನ್ನತ್ತಿರುವ ಆಸ್ಟ್ರೆಲಿಯಾ ತಂಡಕ್ಕೆ ಮೊದಲ ಆಘಾತ ಎದುರಾಗಿದ್ದು, ಆರೋನ್ ಫಿಂಚ್ ೧೧ ರನ್ ಬಾರಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಚಹಾ ವಿರಾಮದ ವೇಳೆಗೆ ಆಸೀಸ್ ೨೮ ರನ್‌ಗೆ ೧ ವಿಕೆಟ್ ಕಳೆದುಕೊಂಡರೇ, ನಂತರ ಆಟ ಮುಂದುವರಿಸಿದ ಆಸೀಸ್ ೧೧-೧೦ ಗಂಟೆ ವೇಳೆ ೬೪ ರನ್ ಗಳಿಸಿ ೩ ವಿಕೆಟ್ ಕಳೆದುಕೊಂಡಿತ್ತು.

ಮೊದಲ ವಿಕೆಟ್‌ಗೆ ಮಾರ್ಕಸ್ ಹ್ಯಾರಿಸ್-ಆರೋನ್ ಫಿಂಚ್ ಜೋಡಿ ೧೨ ಓವರ್‌ಗಳಲ್ಲಿ ೨೮ ರನ್‌ಗಳ ಜತೆಯಾಟ ವಾಡುವ ಮೂಲಕ ಉತ್ತಮ ಆರಂಭದ ಮುನ್ಸೂಚನೆ ನೀಡಿದರು. ಆದರೆ ೧೨ನೇ ಓವರ್’ನ ಕೊನೆಯ ಎಸೆತದಲ್ಲಿ ಅಶ್ವಿನ್ ಬೌಲಿಂಗ್’ನಲ್ಲಿ ಫಿಂಚ್ ಪ್ಯಾಡ್’ಗೆ ಬಡಿದ ಚೆಂಡನ್ನು ಪಂತ್ ಕ್ಯಾಚ್ ಪಡೆದು ಔಟ್‌ಗಾಗಿ ಮನವಿ ಸಲ್ಲಿಸಿದರು. ೧೦.೪೫ ವೇಳೆಗೆ ಮಾರ್ಕಸ್ ಹ್ಯಾರಿಸ್‌ಅವರನ್ನು ಶಮಿ ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಿದರು. ೧೧.೧೦ಕ್ಕೆ ಅಶ್ವಿನ್ ಅವರು ತಮ್ಮ ಮಾರಕ ದಾಳಿಯಿಂದ ಉಸ್ಮಾನ್ ಖ್ವಾಜಾ ವಿಕೆಟ್ ಇತ್ತು ಆಸೀಸ್ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಮಧ್ಯಾಹ್ನಾ ೧೨ರ ವೇಳೆ ಶಮಿ ಮಾಡಿದ ಬೌಲಿಂಗ್‌ಗೆ ಹ್ಯಾಂಡ್ಸ್‌ಕೋಮ್ ಪೂಜಾರಗೆ ಕ್ಯಾಚ್ ಇಟ್ಟು ಹೊರನಡೆದರು. ಅಂತ್ಯದ ವೇಳೆ ಶಾನ್ ಮಾರ್ಷ್ ೩೧ ರನ್ ಹಾಗೂ ಟ್ರಾವಿಸ್ ಹೆಡ್ ೧೧ ರನ್ ಗಳಿಸಿ ಬ್ಯಾಂಟಿಂಗ್ ಮಾಡುತ್ತಿದ್ದರು. ಈಗಾಗಲೇ ಫಿಚ್ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು, ಅಶ್ವಿನ್ ಇಂದು ಮತ್ತಷ್ಟು ವಿಕೆಟ್ ಕಬಳಿಸುವ ಸಾಧ್ಯತೆಯಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ: ೨೫೦ ಮತ್ತು ೩೦೭
ಆಸ್ಟ್ರೇಲಿಯಾ: ೨೩೫ ಮತ್ತು ೧೦೪/೪*

ಆಸೀಸ್ ಹಳೆ ಚಾಳಿ ವೈರಲ್
ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಸ್ಲೆಡ್ಜಿಂಗ್ ಮಂತ್ರದ ಮೊರೆಹೋಗಿದ್ದು, ಟೀಂ ಇಂಡಿಯಾ ಆಟಗಾರರನ್ನ ಗುರಿಯಾಗಿಟ್ಟುಕೊಂಡು ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ.

ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆತನ ಬಳಿ ಬಂದು ಆಸ್ಟ್ರೇಲಿಯಾ ಬೌಲರ್ ಪ್ಯಾಟ್ ಕಮಿನ್ಸ್ ಕೆಣಕಲು ಮುಂದಾಗಿದ್ದರು. ಈ ವೇಳೆ ಆತನ ಮಾತು ತಲೆ ಕಡೆಸಿಕೊಳ್ಳದೇ ಪಂತ್ ಬ್ಯಾಟಿಂಗ್ ನಡೆಸಿದ್ದರು. ಇನ್ನು ೨ನೇ ಇನ್ನಿಂಗ್ಸ್ನಲ್ಲೂ ಅದು ಮುಂದುವರೆದಿದ್ದು, ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕಮಿನ್ಸ್ ಮತ್ತೊಮ್ಮೆ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಕಮಿನ್ಸ್ ಎಸೆತದಲ್ಲಿ ಕೆಎಲ್ ಚೆಂಡನ್ನ ಬೌಂಡರಿ ಗೆರೆ ದಾಟಿಸುತ್ತಿದ್ದಂತೆ ಆತನ ಬಳಿ ಬಂದು ಕೆಣಕುವ ಪ್ರಯತ್ನ ಮಾಡಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗಿದೆ.

Leave a Comment