ಕಾಂಗರೂ ದಾಳಿಗೆ ಟೀಮ್ ಇಂಡಿಯಾ ತತ್ತರ ಕುಸಿದ ಭಾರತಕ್ಕೆ ಪೂಜಾರ ಆಸರೆ, ಭರ್ಜರಿ ಶತಕ

ಅಡಿಲೇಡ್, ಡಿ ೬- ಕಾಂಗರೂಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವರ್ ಪೂಜಾರ ಆಸರೆಯಾಗಿದ್ದಾರೆ. ಒತ್ತಡ ನಡುವೆಯೂ ಆಸೀಸ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಪೂಜಾರ ಆಕರ್ಷಕ ಶತಕ ಸಿಡಿಸಿದರು.

ಆಡಿಲೇಡ್‌ನ ಓವಲ್ ಮೈದಾನದಲ್ಲಿ ಇಂದಿನಿಂದ ಆರಂಭವಾದ ಗವಸ್ಕರ್ ಬಾರ್ಡರ್ ಟೆಸ್ಟ್ ಸರಣಿ ಮೊದಲ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ ಭಾರತ ೨೫೦ ರನ್‌ಗಳಿಗೆ ೯ ವಿಕೆಟ್ ಕಳೆದಕೊಂಡು ಸಾಧಾರಣ ಮೊತ್ತ ಕಲೆಹಾಕಿತ್ತು.
ಚಹಾ ವಿರಾಮದ ವೇಳೆ ೬ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಆ ವೇಳೆ ಚೇತೇಶ್ವರ್ ಪೂಜಾರ್ ಚೇತರಿಸಿಕೊಂಡು ಬಾರಿಸಿದ ಶತಕದ ನೆರವಿನಿಂದ ೯ ವಿಕೆಟ್ ನಷ್ಟಕ್ಕೆ ಭಾರತ ೨೫೦ ರನ್ ಕಲೆ ಹಾಕುವಂತೆ ಮಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸಾಮ್ಯಾನ್‌ಗಳ ಕಳಪೆ ಆಟ ಪ್ರದರ್ಶನದಿಂದಾಗಿ ಆರಂಭದಲ್ಲಿಯೇ ಚಹಾದ ಹೊತ್ತಿಗೆ ಕೇವಲ ೧೪೩ ಮೊತ್ತಕ್ಕೆ ೬ ವಿಕೆಟ್ ಕಳೆದುಕೊಂಡು ತೀವ್ರ ಒತ್ತಡಕ್ಕೆ ಸಿಲುಕಿತ್ತು. ಈ ಬಳಿಕ ತಂಡಕ್ಕೆ ಆಸರೆಯಾದ ಚೇತೇಶ್ವರ್ ಪೂಜಾರ ನಿಧಾನಗತಿ ಆಟದಿಂದ ತಂಡ ೨೫೦ ರನ್ ಗಳಿಸುವಂತೆ ಮಾಡಿದರು.

ಉತ್ತಮ ಆರಂಭ ಸಿಗದೇ ಮತ್ತದೆ ಕಳಪೆ ಬ್ಯಾಟಿಂಗ್ ಮುಂದುವರಿಸಿದ ಕೆ. ಎಲ್ ರಾಹುಲ್ ಕೇವಲ ೨ ರನ್‌ಗೆ ಔಟ್ ಆದರೆ, ಮುರಳಿ ವಿಜಯ್ ಕೂಡ ೧೧ ರನ್‌ಗೆ ಪೆವಿಲಿಯನ್ ಹಾದಿ ಹಿಡಿದರು. ಟೀಂ ಇಂಡಿಯಾದ ಆಪತ್ಬಾಂಧವ ನಾಯಕ ವಿರಾಟ್ ಕೊಹ್ಲಿ ಕೂಡ ತಂಡಕ್ಕೆ ಆಸರೆಯಾಗದೆ ೩ ರನ್ ಗಳಿಸಿ ಔಟ್ ಆಗಿ ಪೆವಿಲಿಯನ್ ಹೆಜ್ಜೆ ಹಾಕಿದರು. ಇನ್ನಿಂಗ್ಸ್ ಕಟ್ಟಲು ಹೊರಟ ಅಜಿಂಕ್ಯ ರಹಾನೆ ೧೩ ರನ್‌ಗೆ ನಿರ್ಗಮಿಸಿದರು. ಇದರಿಂದಾಗಿ ೮೬ ರನ್‌ಗೆ ತನ್ನೆಲ್ಲಾ ಪ್ರಮುಖ ವಿಕೆಟ್ ಕಳೆದುಕೊಂಡಿತು.

ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಕ್ರೀಸ್ ಕಚ್ಚಿ ಆಡುತ್ತಿದ್ದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ರೋಹಿತ್ ಶರ್ಮಾ ಜೊತೆಗೂಡಿ ರನ್ ಕಲೆಹಾಕಲು ಹೊರಟರು. ಆದರೆ ರೋಹಿತ್ ಅವರು ಲಿನ್ ಅವರ ಬೌಲಿಂಗ್ ದಾಳಿಗೆ ೩೭ ರನ್ ಗಳಿಸಿದಾಗ ವಿಕೆಟ್ ಒಪ್ಪಿಸಿದರು. ಇತ್ತ ರಿಷಭ್ ಪಂತ್ ಕೂಡ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿ ೨೫ ರನ್‌ಗೆ ಔಟಾದರು. ಚಹಾ ವಿರಾಮಕ್ಕೂ ಮುಂಚೆ ಚೇತೇಶ್ವರ್ ಪೂಜಾರ ನಿಧಾನಗತಿಯಲ್ಲಿ ಆಡುತ್ತಿದ್ದು, ಆರ್. ಅಶ್ವಿನ್ ಇವರಿಗೆ ಸಾಥ್ ನೀಡುತ್ತಿದ್ದಾರೆ. ಆಸೀಸ್ ಪರ ಜೋಷ್ ಹಾಗೂ ಲಿನ್ ತಲಾ ೨ ವಿಕೆಟ್ ಕಬಳಿಸಿದರು. ಆ ನಂತರ ನಡೆದ ಆಟದಲ್ಲಿ ಆರ್. ಅಶ್ವಿನ್ ೨೫ ರನ್‌ಗೆ ಸುಸ್ತಾದರೆ, ಇಶಾಂತ್ ಶರ್ಮಾ ೪ ರನ್‌ಗೆ ನಿರ್ಗಮಿಸಿದರು. ಇನ್ನು ಪೂಜಾರ ಕೂಡ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ೧೬ನೇ ಶತಕ ಗಳಿಸಿ ಔಟ್ ಆಗಿದ್ದಾರೆ.

ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಖ್ವಾಜಾ

ಒಂದೇ ಕೈನಲ್ಲಿ ಕ್ಯಾಚ್ ಹಿಡಿಯುವ ಮೂಲಕ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ದಾಖಲೆಗೆ ಉಸ್ಮಾನ್ ಖ್ವಾಜಾ ಕಡಿವಾಣ ಹಾಕಿದ್ದಾರೆ.
ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ೧೧ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆತವನ್ನು ಕೆಣಕಲು ಹೋದ ಕೊಹ್ಲಿ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಖ್ವಾಜಾ ಒಂದೇ ಕೈಯಲ್ಲಿ ಪಡೆದ ಅದ್ಭುತ ಕ್ಯಾಚ್‌ಗೆ ಔಟಾದರು. ಆಗ ಭಾರತ ೧೯ ರನ್‌ಗೆ ೩ನೇ ವಿಕೆಟ್ ಕಳೆದುಕೊಂಡಿತು. ೧೬ ಎಸೆತಗಳಲ್ಲಿ ಕೇವಲ ೩ ರನ್ ಗಳಿಸಿ ಔಟಾದ ಕೊಹ್ಲಿ ಒಂದೂವರೆ ವರ್ಷದ ಬಳಿಕ ಕಮಿನ್ಸ್‌ಗೆ ಮತ್ತೊಮ್ಮೆ ಔಟಾದರು. ಈ ಹಿಂದೆ ಆಸ್ಟೇಲಿಯ ತಂಡ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ರಾಂಚಿ ಟೆಸ್ಟ್‌ನಲ್ಲಿ ಕೊಹ್ಲಿ ಅವರು ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದರು.

ಪೋಟೋ ಕ್ಯಾಪ್ಶನ್
ಶತಕ ಬಾರಿಸಿ ಟೀಂ ಇಂಡಿಯಾ ತಂಡಕ್ಕೆ ಆಸರೆಯಾದ ಚೇತೇಶ್ವರ್ ಪೂಜಾರಗೆ ಮಹ್ಮದ್ ಶಮಿ ಅಭಿನಂದಿಸುತ್ತಿರುವುದು.
ಒಂದೇ ಕೈನಲ್ಲಿ ಅದ್ಬುತ ಕ್ಯಾಚ್ ಹಿಡಿದು ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ ಆಸೀಸ್ ಆಟಗಾರ ಉಸ್ಮಾನ್ ಖ್ವಾಜಾ

Leave a Comment