ಕಾಂಕ್ರಿಟ್ ಮಿಕ್ಸರ್ ಲಾರಿ ಹರಿದು ಬ್ಯಾಂಕ್ ಉದ್ಯೋಗಿ ಸಾವು

ಬೆಂಗಳೂರು, ಜ. ೧೨- ಸಿಮೆಂಟ್ ಮಿಕ್ಸರ್ ಲಾರಿ ಹರಿದು ಬ್ಯಾಂಕ್‌ಗೆ ಹೋಗುತ್ತಿದ್ದ ಉದ್ಯೋಗಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಿಗ್ಗೆ ಇಬ್ಬಲೂರು ಜಂಕ್ಷನ್‌ನಲ್ಲಿ ನಡೆದಿದೆ.
ಇಬ್ಬಲೂರಿನ ದೊಡ್ಡ ಮುನಿಯಪ್ಪ (58) ಮೃತಪಟ್ಟವರು. ಬೆಳಿಗ್ಗೆ 9.30ರ ವೇಳೆ ಹತ್ತಿರದ ಬ್ಯಾಂಕಿಗೆ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಮುನಿಯಪ್ಪ ಅವರ ಮೇಲೆ ಸಿಮೆಂಟ್ ಮಿಕ್ಸರ್ ಲಾರಿ ಹರಿದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅಪಘಾತ ಕಂಡ ಸ್ಥಳೀಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಸುಮಾರು 1 ಗಂಟೆಗಳ ಕಾಲ ಇಬ್ಬಲೂರು ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಗಾರೆಮೇಸ್ತ್ರಿ ನೇಣು
ಕೆಆರ್ ಪುರಂನ ನಿಸರ್ಗ ಲೇಔಟ್‌ನ ರಾಜು (40) ಎಂಬ ಗಾರೆಮೇಸ್ತ್ರಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲಸಕ್ಕೆ ಹೋಗಿದ್ದ ರಾಜು ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ಬಂದು ರಾತ್ರಿ ಮನೆಯವರು ಹೊರ ಹೋಗಿದ್ದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಆರ್ ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರಿಗೆ ಬೆಂಕಿ
ನ್ಯೂ ಬಿಎಲ್ ರಸ್ತೆ ಬಳಿ ನಿಂತಿದ್ದ ರಿಡ್ಜ್ ಕಾರಿಗೆ ದುಷ್ಕರ್ಮಿಗಳು ನಿನ್ನೆ ರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿಯಿಂದ ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಪ್ರಕರಣ ದಾಖಲಿಸಿರುವ ಸದಾಶಿವ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment