ಕಸ ವಿಲೇವಾರಿ 500 ಕೋ. ರೂ. ಮೀಸಲಿಡಲು ಸಿಎಂ ಸೂಚನೆ

 

ಬೆಂಗಳೂರು, ಅ. ೨೧- ನಗರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು 500 ಕೋಟಿ ರೂ. ಗಳನ್ನು ಮೀಸಲಿಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ ಉಚಿತ ಕಸ ನೀಡುವಂತೆ ಸೂಚಿಸಿದರು.
ನಗರದ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿಂದು ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಗರದ ಕಸದ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆ ನೀಡಿ, ವೈಜ್ಞಾನಿಕವಾಗಿ ಕಸ ವಿಲೇವಾರಿಯತ್ತ ಗಮನ ಹರಿಸಿ ಎಂದರು.
ಕಸದಿಂದ ವಿದ್ಯುತ್ ಉತ್ಪಾದನೆ ಬಗ್ಗೆ ಹೆಚ್ಚು ಗಮನಹರಿಸಿ, ವಿದ್ಯುತ್ ಉತ್ಪಾದನೆ ಮಾಡಲು ಬರುವ ಖಾಸಗಿ ಸಂಸ್ಥೆಗಳಿಗೆ ಉಚಿತ ಕಸ ನೀಡಿ ಎಂದು ಹೇಳಿದರು.
ಕಸದ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಇನ್ನು ಮುಂದೆ ವಾರಕ್ಕೆ ಒಮ್ಮೆ ಸಭೆ ನಡೆಸುವಂತೆಯೂ ಅವರು ಸೂಚಿಸಿದರು.
ಕಸದಿಂದ ಕಣ್ಣೂರು ಗ್ರಾಮದ ಕುಡಿಯುವ ನೀರು ಕಲುಷಿತಗೊಂಡಿರುವ ಬಗ್ಗೆ ಗ್ರಾಮಸ್ಥರ ಮನವಿಯನ್ನು ಪ್ರಸ್ತಾಪಿಸಿದ ಅವರು, ಕಣ್ಣೂರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಬಿಬಿಎಂಪಿಯಿಂದ ಹಣ ಬಿಡುಗಡೆ ಮಾಡುವಂತೆಯೂ ಸೂಚನೆ ನೀಡಿದರು.
ಮಂಡೂರು ಗ್ರಾಮದ ಕಸ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಮಂಡೂರಿನಲ್ಲಿರುವ ಕಸವನ್ನು ಅಲ್ಲೇ ಕರಗಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಇಂದಿನ ಈ ಸಭೆಯಲ್ಲಿ ಸಂಸದ ಪಿ.ಸಿ. ಮೋಹನ್, ಶಾಸಕ ಅರವಿಂದ ಲಿಂಬಾವಳಿ, ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೇರಿದಂತೆ, ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment