ಕಳ್ಳಭಟ್ಟಿ ತಡೆಗೆ ಅಧಿಕಾರಿಗಳಿಗೆ ಖಡಕ್ ಸೂಚನೆ

ರಾಮದುರ್ಗ, ನ 9- ಕಳ್ಳಭಟ್ಟಿ ತಡೆಯಲು ಕಳ್ಳಭಟ್ಟಿ ತಯಾರಿಸುವ ವ್ಯಕ್ತಿಗಳಿಗೆ ನೀಡುವ ಪ್ರೋತ್ಸಾಹ ಧನ ಖೊಟ್ಟಿಯಾಗಿ ವಿತರಣೆಯಾಗುತ್ತಿದೆ. ಯಾವೊಬ್ಬ ಚುನಾಯಿತ ಪ್ರತಿನಿಧಿಗೂ ಮಾಹಿತಿ ನೀಡುತ್ತಿಲ್ಲ. ಕಳೆದ ಮೂರು ವರ್ಷದಿಂದಲೂ ಕಳ್ಳಭಟ್ಟಿ ತಯಾರಿಕೆ ತಡೆಗೆ ನೀಡುವ ಪ್ರೋತ್ಸಾಹಧನ ಸದ್ಬಳಕೆಯಾಗುತ್ತಿಲ್ಲ. ತಮಗಿಷ್ಟ ಬಂದವರಿಗೆ ನೀಡಲಾಗುತ್ತಿದೆ ಎಂದು ಶಾಸಕ ಮಹಾದೆವಪ್ಪ ಯಾದವಾಡ ಅಬಕಾರಿ ಅಧಿಕಾರಿಗಳ ಮೇಲೆ ಗರಂ ಆದರು.
ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಬಕಾರಿ ಅಧಿಕಾರಿಗಳು ತಮ್ಮ ಗುರಿ ತಲುಪುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಚಹಾ ಮತ್ತು ಬೀಡಾ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ತಡೆಗೆ ಮುಂದಾಗದಿರುವುದರಿಂದ ಗ್ರಾಮೀಣ ಪ್ರದೇಶ ಜನ ದುಡಿದು ತರುವ ಹಣವನ್ನು ಮದ್ಯ ಸೇವನೆಗಾಗಿ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಎಪ್ರೀಲ್‍ತಿಂಗಳಿಂದ ಇಲ್ಲಿಯತನಕ 32 ಅಕ್ರಮ ಮದ್ಯ ಮಾರಾಟ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳ್ಳಭಟ್ಟಿ ಸಾರಾಯಿಗೆ ಸಂಬಂಧಿಸಿದಂತೆ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳ್ಳಭಟ್ಟಿ ದಂಧೆ ನಿಲ್ಲಿಸುವಂತೆ  ಒಟ್ಟು 27 ಜನರಿಗೆ ಪ್ರತಿಯೊಬ್ಬರಿಗೂ ರೂ. 25 ಸಾವಿರ ಪ್ರೋತ್ಸಾಹ ಧನವನ್ನು ವಿತರಿಸಲಾಗಿದೆ ಎಂದು ಅಬಕಾರಿ ಪಿಎಸ್‍ಐ ಬಾಳಕೃಷ್ಣ ಉಪರಿ ವಿವರಣೆ ನೀಡಿದರು.
ಮಲಪ್ರಭಾ ನದಿಯ ಪ್ರವಾಹದಿಂದ ಆತಂಕ ಸೃಷ್ಠಿಯಾಗಿರುವ ಹಂಪಿಹೊಳಿ ಮತ್ತು ಮಾರಡಗಿ ಗ್ರಾಮಗಳಿಗೆ ತಡೆಗೋಡೆ ನಿರ್ಮಿಸಲು ಸರ್ಕಾರ ಒಟ್ಟು 126 ಕೋಟಿ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿಗಳು ತಡೆಗೋಡೆ ನಿರ್ಮಾಣಕ್ಕೆ ಸಹಮತ ನೀಡಿದ್ದು, ಹಣ ಬಿಡುಗಡೆಯಾಗುತ್ತಿದ್ದಂತೆ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು.
ಸವದತ್ತಿ ತಾಲ್ಲೂಕಿನ ಶಿರಸಂಗಿ ಸಬ್‍ಡಿವಿಜನ್‍ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಹಳ್ಳಿಗಳನ್ನು ರಾಮದುರ್ಗದ ವ್ಯಾಪ್ತಿಗೆ ಸೇರಿಸಿಕೊಂಡು ಇಲ್ಲಿನ ಜನರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ನೀರಾವರಿ ಸೌಲಭ್ಯ ಒದಗಿಸಬೇಕು. ತಾಲ್ಲೂಕಿನ 26ನೇ ಹಂಚು ಕಾಲುವೆಯ ಉಳಿದ ಭಾಗವನ್ನು ತ್ವರಿತವಾಗಿ ದುರಸ್ತಿ ಮಾಡಿ ಕಾಲುವೆಯ ಅಂಚಿನ ರೈತರಿಗೂ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಮಲಪ್ರಭಾ ಪ್ರವಾಹದಿಂದ ತಾಲ್ಲೂಕಿನ ಒಟ್ಟು 72 ಶಾಲೆಗಳು ಜಖಂಗೊಂಡಿವೆ. 65 ಶಾಲೆಗಳಲ್ಲಿ ಒಟ್ಟು 148 ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರವಾಹದಿಂದ ಪುಸ್ತಕ ಹಾನಿ ಮಾಡಿಕೊಂಡ ಮಕ್ಕಳಿಗೆ ಹೆಚ್ಚುವರಿಯಾಗಿ ಒಟ್ಟು 5449 ಪುಸ್ತಕಗಳನ್ನು ವಿತರಣೆ ಮಾಡಲಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅಲಾಸೆ ಸಭೆಗೆ ತಿಳಿಸಿದರು.
ಪ್ರವಾಹದಿಂದ ಒಟ್ಟು 802 ಹೆಕ್ಟೇರ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಾದ ಬಾಳೆ, ತರಕಾರಿ ಬೆಳೆ ಹಾನಿಯಾಗಿದೆ. ಅಂದಾಜು 108 ಲಕ್ಷ ಹಾನಿ ಅಂದಾಜಿಸಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕರು ಸಭೆಗೆ ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಕುಂತಲಾ ವಡ್ಡರ, ಉಪಾಧ್ಯಕ್ಷೆ ರುಕ್ಮವ್ವ ವಾರಿಮನಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ದೇಶಪಾಂಡೆ, ಮಾರುತಿ ತುಪ್ಪದ, ರೇಣಪ್ಪ ಸೋಮಗೊಂಡ, ಕೃಷ್ಣಪ್ಪ ಲಮಾಣಿ, ಎಪಿಎಂಸಿ ಅಧ್ಯಕ್ಷ ಪಕೀರಪ್ಪ ಕೊಂಗವಾಡ, ತಹಶೀಲ್ದಾರ ಗಿರೀಶ ಸ್ವಾದಿ, ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಡೆ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Leave a Comment