ಕಳಸಾ ಬಂಡೂರಿ ಯೋಜನೆ ಶೀಘ್ರ ಪ್ರಾರಂಭ: ಬಿಎಸ್‌ವೈ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಅ. ೨೩- ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಪರಿಸರ ಇಲಾಖೆ ಹಸಿರು ನಿಶಾನೆ ತೋರಿರುವುದರಿಂದ, ಶೀಘ್ರ ಯೋಜನೆ ಆರಂಭಿಸಲು ಅಗತ್ಯಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ, ಕಳಸಾ ಬಂಡೂರಿ ವಿವಾದ ಇತ್ಯರ್ಥ ಮಾಡುವ ಭರವಸೆ ನೀಡಲಾಗಿತ್ತು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು, ಯೋಜನೆಯ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅವರು ಡಾಲಱ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಪರಿಸರ ಇಲಾಖೆಯ ಅನುಮತಿ ಸಿಕ್ಕಿರುವುದರಿಂದ ಈ ಯೋಜನೆ ಆರಂಭಿಸಲು ಶೇ. 90 ರಷ್ಟು ದಾರಿ ಸುಗಮವಾಗಿದೆ. ಪರಿಸರ ಇಲಾಖೆಯ ನ್ಯಾಯಾಲಯದ ಗಮನಕ್ಕೆ ತಂದು ಯೋಜನೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮತ್ತೆ ಅತಿವೃಷ್ಠಿಯಿಂದ ಸಾಕಷ್ಟು ಅನಾಹುತವಾಗಿದೆ. ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಈಗ ಆಗಿರುವ ಹಾನಿಯ ಅಂದಾಜು ಮಾಡಿ ಕೇಂದ್ರದಿಂದ ಪರಿಹಾರ ಪಡೆಯಲು ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಹಿಂದಿನ ನೆರೆ, ಈಗಿನ ನೆರೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮತ್ತಷ್ಟು ಪರಿಹಾರ ನೀಡುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಮುಂದಿನ ತಿಂಗಳು ಬಿಜೆಪಿ ಸರ್ಕಾರದ ಶತದಿನದ ಸಂಭ್ರಮಾಚರಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಇನ್ನು ಸಾಕಷ್ಟು ಸಮಯವಿದೆ. ಮಾಧ್ಯಮಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.

Leave a Comment