ಕಳವು ಪ್ರಕರಣ: ಓರ್ವ ಸೆರೆ

ಉಡುಪಿ, ಆ.೭- ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಎಂಬಲ್ಲಿ ಮೂರು ಮನೆಗಳಿಗೆ ನುಗ್ಗಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಕಾರ್ಕಳ ಪೊಲೀಸರು ಆ.೫ರಂದು ರಾತ್ರಿ ೮.೩೦ಕ್ಕೆ ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಸ್ ನಿಲ್ದಾಣದ ಬಳಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಮುಂಡ್ಕೂರು ನಿವಾಸಿ ಶೈಲೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ೨೦೧೭ರಲ್ಲಿ ಮುಂಡ್ಕೂರು ಗ್ರಾಮದ ಜಯ ಎನ್.ಶೆಟ್ಟಿ, ಜ್ಯೋತಿ ಎನ್. ಶೆಟ್ಟಿ ಹಾಗೂ ೨೦೧೮ರಲ್ಲಿ ಮುಂಡ್ಕೂರು ಗ್ರಾಮದ ರಮೇಶ್ ಶೆಟ್ಟಿ ಎಂಬವರ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂರು ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿ ಈ ಮೂರು ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದು, ಅದರಂತೆ ಆತನಿಂದ ಕಳವುಗೈದ ಒಟ್ಟು ಆರು ಲಕ್ಷ ರೂ. ಮೌಲ್ಯದ ಸುಮಾರು ೨೧೦ ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಇಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೊಪಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಈ ಕಾರ್ಯಾಚರಣೆಯಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಎಸ್ಸೈ ವಾಸಪ್ಪ ನಾಯ್ಕ್, ರಾಜೇಶ್, ಪ್ರಶಾಂತ್, ಗಿರೀಶ್, ಸತೀಶ್ ಬಟ್ವಾಡಿ, ರಮೇಶ್, ಅನ್ವರ್ ಅಲಿ, ಚಾಲಕರಾದ ಜಗದೀಶ್ ಮತ್ತು ಗಿರಿಧರ್ ಪೈ ಪಾಲ್ಗೊಂಡಿದ್ದರು. ಈ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ೧೦೦೦೦ರೂ. ನಗದು ಬಹುಮಾನ ಘೋಷಣೆ ಮಾಡಲಾಗಿದೆ.

Leave a Comment