ಕಳವಿಗೆ ಮಕ್ಕಳ ಬಳಕೆ

ಬೆಂಗಳೂರು,ಸೆ.೭-ಚಿಕ್ಕ ಮಕ್ಕಳನ್ನು ಅಂಗಡಿಗೆ ಕಳುಹಿಸಿ ಹಣ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಸಿರುವ ಕೃತ್ಯ ನೆಲಮಂಗಲದ ಅಡಕಿಮಾರನಹಳ್ಳಿಯಲ್ಲಿ ನಡೆದಿದೆ.
ಇಬ್ಬರು ಚಿಕ್ಕ ಮಕ್ಕಳು ಮೊಬೈಲ್ ಅಂಗಡಿಗೆ ಬಂದು, ಕೌಂಟರ್‌ನಲ್ಲಿರುವ ಬೆಲೆ ಬಾಳುವ ವಸ್ತು ಹಾಗೂ ಹಣವನ್ನು ದೋಚಿದ್ದರು,ಮಕ್ಕಳು ಅಂಗಡಿಯಿಂದ ಹೊರಹೋದ ಸ್ವಲ್ಪ ಹೊತ್ತಿನ ಬಳಿಕ ಕಳ್ಳತನ ವಾಗಿರುವುದು ಗೊತ್ತಾಗಿ ಮಾಲೀಕ ಮಂಜುನಾಥ್ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ನೋಡಿದಾಗ ಮಕ್ಕಳ ಕೈಚಳಕ ಬಯಲಾಗಿದೆ.
ಮಧ್ಯಾಹ್ನ ವೇಳೆಗೆ ಮೊದಲು ಒಬ್ಬ ಬಾಲಕ ಮಾತ್ರ ಅಂಗಡಿಯ ಒಳಗೆ ಬರುತ್ತಾನೆ. ತನ್ನ ಕೈಗೆ ಸಿಕ್ಕ ಹಣ ಹಾಗೂ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾನೆ. ಬಳಿಕ ತನ್ನ ಅಣ್ಣನನ್ನು ಕರೆದುಕೊಂಡು ಬಂದು ಮತ್ತಷ್ಟು ಹಣ ಹಾಗೂ ಸಿಮ್ ಕಾರ್ಡ್ ಪ್ಯಾಕೆಟ್ ತೆಗೆದುಕೊಂಡು ಹೋಗುತ್ತಾರೆ. ಕ್ಷಣಾರ್ಧದಲ್ಲಿ ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿರುತ್ತಾರೆ.
ಮಕ್ಕಳು ಸ್ಥಳೀಯ ನಿವಾಸಿಗಳು ಎಂದು ಅರಿತ ಅಂಗಡಿ ಮಾಲೀಕ ಮಂಜುನಾಥ್ ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಾರೆ. ಸ್ಥಳೀಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರನ್ನು ವಿಚಾರಿಸಿದಾಗ, ಅಲ್ಪ ಸ್ವಲ್ಪ ಮಾಹಿತಿ ದೊರೆಯುತ್ತದೆ. ಇದನ್ನು ಆದಾರಿಸಿ ಮಂಜನಾಥ್ ಕಳ್ಳತನ ಮಾಡಿದ ಮಕ್ಕಳ ಮನೆಗೆ ಹೋದಾಗ ಒಬ್ಬ ಬಾಲಕ ಮಾತ್ರ ಸಿಕ್ಕಿಬಿದ್ದಿದ್ದಾನೆ.
ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದ ೧೮ ಸಾವಿರ ರೂ. ತಂದುಕೊಡುತ್ತಾನೆ. ಈ ಘಟನೆಯು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Comment