ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ : ಸೂಚನೆ

ದಾವಣಗೆರೆ, ಮೇ. 19 – ಬಿತ್ತನೆ ಬೀಜ ಕಂಪನಿಗಳಿಂದ ಹೊಸಪ್ಯಾಕೇಟ್ ನಲ್ಲಿ ಅವಧಿ ಮುಗಿದಿರುವ ಕಳಪೆ ಬಿತ್ತನೆ ಬೀಜಗಳ ಮಾರಾಟ ನಡೆಯುತ್ತಿದೆ ಇದರಿಂದ ರೈತರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಸಂಗನಗೌಡ್ರು ದೂರಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕೃಷಿ ಚಟುವಟಿಕೆಗಳೇ ಸ್ಥಗಿತ ಗೊಂಡಿವೆ. ಆದರೂ ಸಹ ರೈತರು ಕೊಳವೆಬಾವಿಗಳ ನೆರವಿನಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೆ ಕಳಪೆ ಬೀಜ ನೀಡುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಕೃಷಿ ಅಧಿಕಾರಿಗಳು ಜಾಗೃತಿ ವಹಿಸಿ ಇದರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾ.ಪಂ ಉಪಾಧ್ಯಕ್ಷ ಕೆ.ವಿ.ಪರಮೇಶ್ವರಪ್ಪ ಮಾತನಾಡಿ ಪ್ರತಿಸಾರಿ ಜಿಲ್ಲೆಗೆ ಕಳಪೆ ಬೀಜ ಬರುತ್ತಿವೆ. ಹಾಗಾಗಿ ದಾವಣಗೆರೆ ಕೃಷಿ ಅಧಿಕಾರಿ, ರಾಣೇಬೆನ್ನೂರಿನ ಕೃಷಿ ಅಧಿಕಾರಿ ಜಂಟಿ ಕಾರ್ಯಚರಣೆ ನಡೆಸಿ ಕಳಪೆ ಬಿತ್ತನೆ ಬೀಜ ಬರುತ್ತಿರುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದರು.

ತಾ.ಪಂ ಇಓ ಪ್ರಭುದೇವ್ ಮಾತನಾಡಿ, ಜಿಲ್ಲೆಯಲ್ಲಿ ಬರದ ಛಾಯೆ ಮೂಡಿದೆ. ಅದರಲ್ಲೂ ಬಿತ್ತನೆ ಬೀಜ ಕಂಪನಿಗಳಿಂದ ಕಳಪೆ ಬೀಜ ಬರುತ್ತಿರುವುದು ದುರಂತದ ಸಂಗತಿ. ಕೃಷಿ ಅಧಿಕಾರಿಗಳು ಕೂಡಲೇ ಜಾಗೃತರಾಗಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವುದರ ವಿರುದ್ದ ಕ್ರಮತೆಗೆದುಕೊಳ್ಳಬೇಕೆಂದು ಹೇಳಿದರು.
ಗ್ರಾಮೀಣ ಪಂಚಾಯತ್ ರಾಜ್ ಇಂಜಿನಿಯರ್ ಪರಮೇಶ್ವರಪ್ಪ ಮಾತನಾಡಿ, ಈಗಾಗಲೇ 22 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಪೂರೈಸಲಾಗುತ್ತಿದೆ. 7 ಖಾಸಗಿ ಬೋರ್ ವೆಲ್ ಗಳಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರದ ಛಾಯೆ ಮೂಡಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತಾ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

Leave a Comment