ಕಳಪೆ ಕೃಷಿ ಉಪಕರಣ ವಿತರಣೆ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕರ ಸೂಚನೆ

ತುಮಕೂರು, ಮೇ ೩೦- ರೈತರಿಗೆ ಕಳಪೆ ಕೃಷಿ ಉಪಕರಣಗಳನ್ನು ಸರಬರಾಜು ಮಾಡಿದ ಬಾಡಿಗೆ ಕೃಷಿ ಉಪಕರಣಗಳ ವಿತರಕರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಕೃಷಿ ಅಧಿಕಾರಿಗಳು ತಾಕೀತು ಮಾಡಿದರು.
ಕೂಡಲೇ ರೈತರಿಗೆ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ಕೃಷಿ ಯಂತ್ರೋಪಕರಣಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಊರ್ಡಿಗೆರೆ ಗ್ರಾಮದಲ್ಲಿ ರಿಯಾಯ್ತಿ ದರದಲ್ಲಿ ರೈತರಿಗೆ ಪೂರ್ವ ಮುಂಗಾರಿನ ಶೇಂಗಾ ಸೇರಿದಂತೆ ಇತರೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಿ ಅವರು ಮಾತನಾಡಿದರು.
ರೈತರು ದೇಶದ ಬೆನ್ನೆಲುಬು. ಇಂತಹ ರೈತರಿಗೆ ಕಳಪೆ ಗುಣಮಟ್ಟದ ಕೃಷಿ ಯಂತ್ರೋಪಕರಣಗಳನ್ನು ಸರಬರಾಜು ಮಾಡಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಂಡು ಅವರನ್ನು ಕಪ್ಪುಪಟ್ಟಿಗೆ ಸೇರಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗದಂತೆ ಗುಣಮಟ್ಟದ ಯಂತ್ರೋಪಕರಗಳನ್ನು ತಕ್ಷಣ ನೀಡಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
@12bc = ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ
ತುಮಕೂರು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದೇ ಗ್ರಾಮಸ್ಥರು ಫ್ಲೋರೈಡ್ ನೀರನ್ನೇ ಉಪಯೋಗಿಸುತ್ತಿದ್ದುದನ್ನು ಅರಿತ ಶಾಸಕ ಗೌರಿಶಂಕರ್, ಸಾರ್ವಜನಿಕರ ಒತ್ತಾಸೆಯ ಮೇರೆಗೆ ಶಾಸಕರ ನಿಧಿಯಿಂದ ಒಂದು ಘಟಕಕ್ಕೆ 12 ಲಕ್ಷ ರೂ.ನಂತೆ 6 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಸುಮಾರು 72 ಲಕ್ಷ ರೂ.ಗಳನ್ನು ನೀಡಿದರು.
ಅದರಂತೆ ಡಿ.ಟಿ. ಪಾಳ್ಯ, ಐನಾಪುರ, ಚಿಕ್ಕಕೊರಟಗೆರೆ, ಚಿಕ್ಕಾಪುರ, ಕೆಂಬಳಲು, ಕೈದಾಳ ಗ್ರಾಮಗಳಲ್ಲಿ ನೂತನವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣಗೊಂಡಿದ್ದವು. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿ, ಆ ಗ್ರಾಮಗಳಲ್ಲಿ ಉದ್ಭವಿಸಿದ್ದ ಕುಡಿಯುವ ನೀರಿನ ಬವಣೆಯನ್ನು ನೀಗಿಸಿದ್ದಾರೆ.
ಗ್ರಾಮಾಂತರ ಜನತೆಗೆ ಶುದ್ಧ ಕುಡಿಯುವ ನೀರೊದಗಿಸಬೇಕೆಂಬ ಹಿನ್ನೆಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿದ್ದು, ಶಾಸಕರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆಂಗೇಗೌಡ, ಕೃಷಿ ಅಧಿಕಾರಿ ಆಶಾ ಸೇರಿದಂತೆ ಜೆಡಿಎಸ್‍ನ ಎಲ್ಲಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Share

Leave a Comment